ಕನ್ನಡಪ್ರಭ ವಾರ್ತೆ ಮದ್ದೂರು
ಖಾಸಗಿ ಹಾಲಿನ ಡೇರಿಗಳೊಂದಿಗೆ ಪೈಪೋಟಿ ನೀಡಲು ಹೈನುಗಾರರು ಸಂಘಗಳ ಮೂಲಕ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದು ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹೇಳಿದರು.ತಾಲೂಕಿನ ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ನಡೆದ ರಾಸುಗಳಿಗೆ ವಿಮೆ ಸೌಲಭ್ಯ, ಬರಡು ರಾಸುಗಳ ತಪಾಸಣಾ ಶಿಬಿರ ಹಾಗೂ ಹಾಲು ಉತ್ಪಾದಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರ ಮತ್ತು ಹೈನುಗಾರರ ಉಳಿವಿಗೆ ಹಾಲು ಒಕ್ಕೂಟ ಶ್ರಮಿಸುತ್ತಿದೆ. ಇದರ ನಡುವೆಯೂ ಸಹ ಖಾಸಗಿ ಡೇರಿಗಳು ನಂದಿನಿ ಹಾಲಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿವೆ. ಈ ಪೈಪೋಟಿ ಎದುರಿಸಬೇಕಾದರೆ ಒಕ್ಕೂಟ ಗ್ರಾಹಕರಿಗೆ ಗುಣಮಟ್ಟದ ಹಾಲು ಮಾರಾಟ ಮಾಡುವುದು ಅತ್ಯವಶ್ಯಕ ಎಂದರು.ಮತ್ತೋರ್ವ ನಿರ್ದೇಶಕ ಎಂ.ಕೆ.ಹರೀಶ್ ಬಾಬು ಮಾತನಾಡಿ, ನಗರಕೆರೆ ಡೇರಿ ಸುವರ್ಣ ವರ್ಷಾಚರಣೆ ಹೊಸ್ತಿಲಲ್ಲಿದ್ದು, ಸಂಘದ ಸುವರ್ಣ ಭವನ ನಿರ್ಮಾಣಕ್ಕೆ ಶಾಸಕರು, ಒಕ್ಕೂಟ ಮತ್ತು ವೈಯಕ್ತಿಕವಾಗಿ ಆರ್ಥಿಕ ಅನುದಾನ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ ಎ.ಎನ್. ಮಂಜೇಶ್ ಗೌಡ ಮಾತನಾಡಿ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಉತ್ತರ ಪ್ರದೇಶದ ನವ ದೆಹಲಿ ಮಾರುಕಟ್ಟೆ ಪ್ರವೇಶ ಮಾಡಿದೆ. ಪ್ರತಿದಿನ 40ರಿಂದ 50 ಸಾವಿರ ಲೀಟರ್ ಮಾರಾಟವಾಗುತ್ತಿದೆ.ಅಲ್ಲಿನ ಆಡಳಿತ ಮತ್ತು ಗ್ರಾಹಕರಿಂದ ಒಕ್ಕೂಟದ ಹಾಡಿಗೆ ಉತ್ತಮ ಸ್ಪಂದನೆ ದೊರಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ನಗರಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ರೂಪ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮನ್ಮುಲ ಆಡಳಿತ ವಿಭಾಗ ದ ವ್ಯವಸ್ಥಾಪಕ ಡಾ.ಆಕಲಪ್ಪರೆಡ್ಡಿ, ಸಹಾಯಕ ವ್ಯವಸ್ಥಾಪಕ ಗೋವರ್ಧನ್, ಹಿರಿಯ ಪಶು ಪರಿವೀಕ್ಷಕ ಯೋಗೇಶ್, ಆರೋಗ್ಯ ಅಧಿಕಾರಿ ಮೇಘಶ್ರೀ, ಸಂಘದ ಉಪಾಧ್ಯಕ್ಷ ರಾಜಶೇಖರ್, ನಿರ್ದೇಶಕರಾದ ಶಂಕರ್, ಶೇಖರ್, ಶಿವಲಿಂಗಯ್ಯ, ಕರಿಯಪ್ಪ, ನ.ಲಿ.ಕೃಷ್ಣ, ಸಿಇಒ ಕಿರಣ್ ಕುಮಾರ್ ಭಾಗವಹಿಸಿದ್ದರು.