ಕನ್ನಡಪ್ರಭ ವಾರ್ತೆ ತಿಪಟೂರು
ಚುನಾವಣೆಯಷ್ಟೇ ಮುಖ್ಯ ಬರದ ಸಮಸ್ಯೆಯೂ ಆಗಿರುವುದರಿಂದ ಎಲ್ಲ ಅಧಿಕಾರಿಗಳು ಬರದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಆದ್ಯತೆ ನೀಡಿ ಕೆಲಸ ಮಾಡಬೇಕು. ಯಾರೂ ಮೇಲಧಿಕಾರಿಗಳ ಅನುಮತಿ ಇಲ್ಲದೆ ರಜೆ ಹಾಕಕೂಡದು. ಎಲ್ಲರೂ ಕರ್ತವ್ಯನಿರತ ಸ್ಥಳದಲ್ಲೇ ಇರಬೇಕು. ಒಂದು ಇಲಾಖೆಯ ಜೊತೆ ಸಂಬಂದಿಸಿದ ಇಲಾಖೆಗಳು ಪರಸ್ಪರ ಕೈಜೋಡಿಸಿ ನೀರು ಮತ್ತಿತರೆ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು.
ಕುಡಿವ ನೀರಿಗೆ ಸಮಸ್ಯೆ ಉಂಟಾದರೆ ಕೂಡಲೇ ಟ್ಯಾಂಕರ್‌ನಿಂದ ನೀರು ಕೊಡಬೇಕು. ನಂತರ ಹತ್ತಿರದಲ್ಲಿ ಖಾಸಗಿಯವರ ಬೋರ್‌ವೆಲ್ ಇದ್ದರೆ ಅವರಿಗೆ ಹಣ ನೀಡಿ ನೀರು ತೆಗೆದುಕೊಂಡು ಜನರಿಗೆ ನೀಡಬೇಕು. ಈ ಸಂಬಂದ ನೀರು ನೀಡಿದವರಿಗೆ ವಾರದಲ್ಲಿ ಬಿಲ್ ಪಾವತಿಸಬೇಕು. ಯಾವುದೇ ಕಾರಣಕ್ಕೂ ಬಿಲ್ ನೀಡುವುದನ್ನು ವಿಳಂಬ ಮಾಡುವಂತಿಲ್ಲ. ಅಗತ್ಯವಿದ್ದಲ್ಲಿ ಹೊಸ ಬೋರ್‌ವೆಲ್ ಕೊರೆಯಲು ನಮ್ಮಿಂದ ಹಾಗೂ ಸಂಬಂಧಿಸಿದವರಿಂದ ಅನುಮತಿ ಪಡೆದು ಬೋರ್‌ವೆಲ್ ಕೊರೆಸಿ ವಿದ್ಯುತ್ ಹಾಗೂ ಪಂಪು, ಮೋಟರ್ ಅಳವಡಿಸಿ ನೀರು ನೀಡಬೇಕು. ಇದರಲ್ಲಿ ಯಾರೇ ಲೋಪಮಾಡಿದಲ್ಲಿ ಜಿಲ್ಲಾಧಿಕಾರಿ ಹಾಗೂ ಸಿಇಓ ಗಮನಕ್ಕೆ ತಂದು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ವಿವಿಧ ಇಲಾಖೆಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡು ಮುಂದೆ ಅನುಸರಿಸಬೇಕಾದ ಮುನ್ನೆಚ್ಚೆರಿಕೆಗಳ ಬಗ್ಗೆ ಸಲಹೆ ನೀಡಿದರು.ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ, ಯಾವುದೇ ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದರೆ ಕೂಡಲೆ ಸರಿಪಡಿಸಿ ಶುದ್ಧಕುಡಿಯುವ ನೀರು ನೀಡಬೇಕು. ಗ್ರಾಮಗಳಲ್ಲಿನ ಟ್ಯಾಂಕಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಕುಡಿಯಲು ನಿರ್ಮಿಸಿರುವ ನೀರಿನ ತೊಟ್ಟಿಗಳಿಗೆ ಕೊರತೆ ಇಲ್ಲದಂತೆ ನೀರು ಹರಿಸಬೇಕು. ಸಮಸ್ಯೆ ಉಂಟಾದ ಮೇಲೆ ತೊಂದರೆಯಾದಲ್ಲಿ ಸಂಬಂದಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕಿನ ತಿಮ್ಮಲಾಪುರ, ಬಿಳಿಗೆರೆ, ಸಿಡ್ಲೇಹಳ್ಳಿ, ಕೆರೆಗೋಡಿ, ರಂಗಾಪುರ, ಬಜಗೂರು, ಹಾಲ್ಕುರಿಕೆ, ಬಳುವನೇರಲು, ಈಚನೂರು, ಹುಣಸೇಘಟ್ಟ, ಕರಡಿ, ಅರಳಗುಪ್ಪೆ, ಕುಪ್ಪಾಳು, ಮಣಕೀಕೆರೆ ಸೇರಿ ವಿವಿಧ ಗ್ರಾಮಗಳಲ್ಲಿನ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು.