ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆ ಆವರಣದಲ್ಲಿ ಆಟವಾಡುವಾಗ ಗೇಟ್ ಸಮೇತ ಕಾಂಪೌಂಡ್ ಕುಸಿದು ಐದು ವರ್ಷದ ಮಗು ಮೃತಪಟ್ಟು, ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಅಫೀನ್‌ (5) ಮೃತ ದುರ್ದೈವಿ. ಈ ಘಟನೆ ಗಾಯಗೊಂಡಿರುವ ಸಮನ್ವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಮ್ಮ ಸೋದರ ಸಂಬಂಧಿ ಮನೆಗೆ ಪೋಷಕರ ಜತೆ ಅಫೀನ್ ಬಂದಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಯಾದಗಿರಿ ಜಿಲ್ಲೆಯ ದಾವಲ್ ಸಾಬ್ ಚಾಲಕರಾಗಿದ್ದು, 5 ದಿನಗಳ ಹಿಂದ ಬಂಡಿಕೊಡಿಗೇಹಳ್ಳಿಯಲ್ಲಿರುವ ತಮ್ಮ ಸೋದರ ಮನೆಗೆ ಕುಟುಂಬ ಸಮೇತ ಅವರು ಬಂದಿದ್ದರು. ಆ ಮನೆ ಹೊರಾವರಣದಲ್ಲಿ ಮೂವರು ಮಕ್ಕಳು ಬುಧವಾರ ಸಂಜೆ 6.30 ಗಂಟೆ ಸುಮಾರಿಗೆ ಆಟವಾಡುತ್ತಿದ್ದರು. ಗೇಟ್ ಹಿಡಿದು ನಲಿಯುತ್ತಿದ್ದ ಮಕ್ಕಳ ಮೇಲೆ ಗೇಟ್ ಸಮೇತ ಗೋಡೆ ಕುಸಿದಿದೆ. ತಕ್ಷಣವೇ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ಸ್ಥಳೀಯರು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಅಫೀನ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.