ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಭದ್ರತಾ ಏಜೆನ್ಸಿ ಮಾಲಿಕರೊಬ್ಬರನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿ 1.9 ಕೋಟಿ ರು. ಹಣವನ್ನು ದುಷ್ಕರ್ಮಿಗಳು ದೋಚಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಮ್ಮನಹಳ್ಳಿ ಪಾಳ್ಯದ ನಿವಾಸಿ ಭದ್ರತಾ ಏಜೆನ್ಸಿ ಮಾಲೀಕ ಆರ್.ಐ.ಶಿವಶಂಕರ್ ದರೋಡೆಗೊಳಗಾಗಿದ್ದು, ಈ ಕೃತ್ಯದ ಹಿಂದೆ ರೈಸ್ ಫುಲ್ಲಿಂಗ್ ದಂಧೆಕೋರರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಕಾರಿನಲ್ಲಿ ತಮ್ಮ ಮನೆಗೆ ಮಂಗಳವಾರ ರಾತ್ರಿ ಶಿವಶಂಕರ್ ತೆರಳುವಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.
ಕಂಪನಿ ಸ್ಥಾಪನೆಗೆ ಇಟ್ಟಿದ್ದ ಹಣ:ತನ್ನ ಸ್ನೇಹಿತನ ಜತೆ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿರುವ ಶಿವಶಂಕರ್, ತಮ್ಮ ಕುಟುಂಬದ ಜತೆ ನೆಲೆಸಿದ್ದಾರೆ. ಅಲ್ಲದೆ ಹಳೆ ಕಾಲದ ವಿಗ್ರಹಗಳ ಮಾರಾಟ ಹಾಗೂ ರೈಸ್ ಫುಲ್ಲಿಂಗ್ ದಂಧೆಯಲ್ಲಿ ಸಹ ಆತ ಪಾತ್ರವಹಿಸಿದ್ದಾನೆ. ತನ್ನ ಸ್ನೇಹಿತ ಆಂಧ್ರಮೂಲದ ಮೊಹಮದ್ ಪರ್ವೇಜ್, ಜಿಪ್ಸನ್ ಹಾಗೂ ಅಲಿ ಜತೆಗೆ ಅಮೆರಿಕನ್ ನ್ಯೂಕ್ಲಿಯರ್ ರೀಸರ್ಚ್ ಸೆಂಟರ್ ಹೆಸರಿನಲ್ಲಿ ಕಂಪನಿಯನ್ನು ಸ್ಥಾಪಿಸಲು ಶಿವಶಂಕರ್ ಯೋಜಿಸಿದ್ದ ಎಂದು ಮೂಲಗಳು ಹೇಳಿವೆ.
ಈ ಕಂಪನಿ ಸ್ಥಾಪನೆ ಸಲುವಾಗಿ ಪ್ರತಿಯೊಬ್ಬರು ತಮ್ಮ ಪಾಲಿನ ಹಣ ಹೂಡಿಕೆ ಮಾಡಲು ಸಿದ್ಧರಿದ್ದರು. ಈ ವ್ಯವಹಾರದ ಜೂ.13ರಂದು 35 ಲಕ್ಷ ರು.ಹಣವನ್ನು ಸ್ನೇಹಿತರಿಂದ ಪಡೆದು ಆತ ಮನೆಯಲ್ಲಿಟ್ಟಿದ್ದ. ಯಲಹಂಕ ಬಳಿ ಹೋಟೆಲ್‌ನಲ್ಲಿ ಪರ್ವೇಜ್ ಹಾಗೂ ಇತರರಿಂದ 74 ಲಕ್ಷ ರು.ಪಡೆದು ಶಿವಶಂಕರ್ ಮನೆಗೆ ತೆರಳುವಾಗ ದರೋಡೆ ನಡೆದಿದೆ. ಕೃತ್ಯದಲ್ಲಿ ಸಾಂದರ್ಭಿಕ ಸಾಕ್ಷ್ಯಗಳನ್ನು ಅವಲೋಕಿಸಿದಾಗ ಪರಿಚಯಸ್ಥರ ಕೈವಾಡ ಶಂಕೆಯಿದೆ.
ದರೋಡೆ ಹೇಗೆ?
ಯಲಹಂಕದಿಂದ ರಾತ್ರಿ ಕಾರಿನಲ್ಲಿ ಮನೆಗೆ ಶಿವಶಂಕರ್ ಮರಳುತ್ತಿದ್ದರು. ಆಗ ಕುದುರುಗೆರೆ ಕಾಲೋನಿಯ ಗಣೇಶ ದೇವಾಲಯದ ರಸ್ತೆಯಲ್ಲಿ ಅವರ ಕಾರನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅಡ್ಡಗಟ್ಟಿದ್ದಾರೆ. ಆಗ ಕಾರು ನಿಲ್ಲಿಸಿದ ಕೂಡಲೇ ಮತ್ತೊಂದು ಕಾರಿನಲ್ಲಿ ಐವರು ದುಷ್ಕರ್ಮಿಗಳು ಬಂದಿದ್ದಾರೆ. ಕೂಡಲೇ ಶಿವಶಂಕರ್ ಹಾಗೂ ಅವರ ಚಾಲಕ ಚೇತನ್‌ಗೆ ಚಾಕು ತೋರಿಸಿ ಬೆದರಿಸಿ ಕಾರಿನಿಂದ ದರೋಡೆಕೋರರು ಕೆಳಗಿಳಿಸಿದ್ದಾರೆ. ಬಳಿಕ ತಮ್ಮ ಕಾರಿಗೆ ಅವರನ್ನು ಹತ್ತಿಸಿಕೊಂಡು ನೆಲಮಂಗಲ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆರೋಪಿಗಳು ಬೆದರಿಸಿದ್ದಾರೆ. ಬಳಿಕ ಶಿವಶಂಕರ್ ಅವರಿಂದ ಪತ್ನಿಗೆ ವಾಟ್ಸಪ್ ಕರೆ ಮಾಡಿಸಿ ತಮ್ಮ ಸ್ನೇಹಿತರು ಬರುತ್ತಾರೆ. ಹಣ ಕೊಡುವಂತೆ ಹೇಳಿಸಿದ್ದಾರೆ. ತರುವಾಯ ಶಿವಶಂಕರ್ ಮನೆಗೆ ಜತೆ ಓರ್ವ ಆರೋಪಿ ತೆರಳಿ 35 ಲಕ್ಷ ರು. ಸಂಗ್ರಹಿಸಿದ್ದಾರೆ. ನಂತರ ಕಾರಿನಲ್ಲಿ 74 ಲಕ್ಷ ರು. ದೋಚಿ ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.ರೈಸ್ ಪುಲ್ಲಿಂಗ್ ದಂಧೆಕೋರ?ದೂರುದಾರ ಶಿವಶಂಕರ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ರೈಸ್‌ಪುಲ್ಲಿಂಗ್ ದಂಧೆಯಲ್ಲಿ ಆತ ತೊಡಗಿದ್ದ. ಕಳೆದ ವರ್ಷದ ಆತನ ವಿರುದ್ಧ ವಿ.ವಿ.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈಸ್‌ಪುಲ್ಲಿಂಗ್ ಹೆಸರಿನ ಅದೃಷ್ಟದ ಚೆಂಬು ತೋರಿಸಿ ಕಾರಿಯಪ್ಪ ಎಂಬುವವರಿಗೆ ಮೋಸ ಮಾಡಿ ಹಣ ಮಾಡಿದ್ದಾಗಿ ಸಹ ಅವರು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ದರೋಡೆ ಕೃತ್ಯದ ಹಿಂದೆ ರೈಸ್ ಪುಲ್ಲಿಂಗ್ ದಂಧೆ ನೆರಳಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
