ಚನ್ನಪಟ್ಟಣ : ಚನ್ನಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕ್ಷೇತ್ರದ ಜನತೆ ನನಗೆ ಆಶೀರ್ವದಿಸಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿದರು.
ಪ್ರಚಾರದ ವೇಳೆ ಮಾತನಾಡಿದ ಯೋಗೇಶ್ವರ್, ಅಭಿವೃದ್ಧಿ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಯಾವುದೇ ಸಾಕ್ಷಿಗುಡ್ಡೆಯನ್ನು ಬಿಟ್ಟಿಲ್ಲ. ಮುಖ್ಯಮಂತ್ರಿ, ಶಾಸಕರಾಗಿ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರು ನಿಖಿಲ್‌ರನ್ನು ಹೊರಕ್ಕೆ ಕಳುಹಿಸಿ ಚನ್ನಪಟ್ಟಣದ ಸ್ವಾಭಿಮಾನ ಎತ್ತಿಯಿಡಿಯಬೇಕು ಎಂದರು.
ಚನ್ನಪಟ್ಟಣದಲ್ಲಿ ಗೆದ್ದು ಹೋದವರು ಈಗ ಮಗನ ಪರ ಮತ ಕೇಳಲು ಬಂದಿದ್ದಾರೆ. ಕುಮಾರಸ್ವಾಮಿ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನತೆಗೆ ಮೋಸ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗಲೂ ಮೂಲಸೌಕರ್ಯ ಕಲ್ಪಿಸಲಿಲ್ಲ. ಒಳಚರಂಡಿ, ಶೌಚಾಲಯ, ಕುಡಿಯುವ ನೀರು, ಬಸ್ ನಿಲ್ದಾಣ ನಿರ್ಮಾಣ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ಬರೀ ಕಣ್ಣೀರು ಹಾಕಿಕೊಂಡು ಭಾವನಾತ್ಮಕ ಮಾತುಗಳನ್ನಾಡಿ ವೋಟ್ ಪಡೆಯುತ್ತಿದ್ದರು ಎಂದರು.
ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದಾಗ ಈ ಜನತೆಯ ಋಣ ತೀರಿಸಲು ಕ್ಷೇತ್ರದ ಹಳ್ಳಿಗಳಿನ ಕೆರೆಗಳಿಗೆ ನೀರು ತುಂಬಿಸಿದ್ದೇನೆ. ನಿರಂತರ ಶ್ರಮದಿಂದ ಈ ಭಾಗದ ಕೆರೆಗಳಿಗೆ ನೀರು ಬಂತಿತು. ಆದರೆ ಕುಮಾರಸ್ವಾಮಿ ಮಾತಿನಿಂದ ನೀರು ತುಂಬಿಸಿದರೆ ಹೊರತು ಏನೂ ಮಾಡಲಿಲ್ಲ. ಅವರಿಗೆ ಅವರ ಮಗನಿಗೆ ಹಳ್ಳಿಗಳ ಹೆಸರು ಸರಿಯಾಗಿ ಗೊತ್ತಿಲ್ಲ ಎಂದರು.
ಚನ್ನಪಟ್ಟಣ ವ್ಯಾಪ್ತಿಯ ಎಲೆಕೇರಿ, ಡೂಮ್ ಲೈಟ್ ಸರ್ಕಲ್, ಹನುಮಂತನಗರ, ತಟ್ಟೆಕೆರೆ, ಪೇಟೆಚೇರಿ ವಾರ್ಡ್‌ಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಮುಖಂಡರಾದ ರಘುನಂದನ್ ರಾಮಣ್ಣ ಸೇರಿದಂತೆ ಹಲವಾರು ನಾಯಕರು, ಸ್ಥಳೀಯ ಮುಖಂಡರು ಯೋಗೇಶ್ವರ್ ಪರ ಮತಯಾಚಿಸಿದರು.
ಸಿಎಂ, ಡಿಸಿಎಂ ರಿಂದ ಬೃಹತ್ ಸಭೆ: ಚನ್ನಪಟ್ಟಣದಲ್ಲಿ ಸೋಮವಾರ ಬೃಹತ್ ಬಹಿರಂಗ ಸಭೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು, ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.
ಉದ್ಯಮಿಗಳ ಸಾಲ ಮನ್ನಾದಿಂದ ದಿವಾಳಿ ಆಗುವುದಿಲ್ಲವೇ?: ಬಡವರಿಗೆ ಕಾರ್ಯಕ್ರಮ ಮಾಡಿದರೆ ಸರ್ಕಾರ ದಿವಾಳಿ ಆಗುತ್ತದೆ ಎನ್ನುವ ಬಿಜೆಪಿ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದಾಗ ಸರ್ಕಾರ ದಿವಾಳಿ ಆಗುವುದಿಲ್ಲವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದರು. ಬಡವರ ಪರ ಕಾರ್ಯಕ್ರಮ ಮಾಡಿದರೆ ಅವರಿಗೆ ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುಷ್ಪವೃಷ್ಠಿ, ಪೂರ್ಣಕುಂಭದ ಸ್ವಾಗತ: ಸಿ.ಪಿ.ಯೋಗೇಶ್ವರ್ ಅವರು ಪಟ್ಟಣದ ನಾನಾ ಭಾಗಗಳಿಗೆ ಪ್ರಚಾರಕ್ಕೆ ತೆರಳಿದ ವೇಳೆ ಮಹಿಳೆಯರು ಪೂರ್ಣ ಕುಂಭದೊಂದಿಗೆ ಬರಮಾಡಿಕೊಂಡರೆ ಕಾರ್ಯಕರ್ತರು ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.