ದಾವಣಗೆರೆ ಬಂದ್‌ಗೆ ಸಹಕರಿಸಿ: ಬೈಕ್ ರ್ಯಾಲಿಯಲ್ಲಿ ಬಿಜೆಪಿ ಮನವಿ

KannadaprabhaNewsNetwork |  
Published : Jun 28, 2025, 12:21 AM IST

ಸಾರಾಂಶ

ಭದ್ರಾ ಬಲದಂಡೆ ನಾಲೆ ಸೀಳಿ ಕೈಗೊಂಡ ಅಪಾಯಕಾರಿ, ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣದಿಂದ ನಿಲ್ಲಿಸುವಂತೆ ಒತ್ತಾಯಿಸಿ ಜೂ.28ರಂದು ಕರೆ ನೀಡಿರುವ ದಾವಣಗೆರೆ ಬಂದ್ ಹಿನ್ನೆಲೆ ನಗರದಲ್ಲಿ ಶುಕ್ರವಾರ ಬೈಕ್ ರ್ಯಾಲಿ ನಡೆಸಲಾಯಿತು.

- ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರ ರ್ಯಾಲಿಗೆ ಚಾಲನೆ । ಸ್ಕೂಟಿಯಿಂದ ಬಿದ್ದ ರೇಣುಕಾಚಾರ್ಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಭದ್ರಾ ಬಲದಂಡೆ ನಾಲೆ ಸೀಳಿ ಕೈಗೊಂಡ ಅಪಾಯಕಾರಿ, ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣದಿಂದ ನಿಲ್ಲಿಸುವಂತೆ ಒತ್ತಾಯಿಸಿ ಜೂ.28ರಂದು ಕರೆ ನೀಡಿರುವ ದಾವಣಗೆರೆ ಬಂದ್ ಹಿನ್ನೆಲೆ ನಗರದಲ್ಲಿ ಶುಕ್ರವಾರ ಬೈಕ್ ರ್ಯಾಲಿ ನಡೆಸಲಾಯಿತು.

ನಗರದ ಹಳೇ ಪ್ರವಾಸಿ ಮಂದಿರದ ಬಳಿ ಭಾರತೀಯ ರೈತ ಒಕ್ಕೂಟದ ಹಿರಿಯ ನಾಯಕ, ಬಿಜೆಪಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಬೈಕ್ ರ್ಯಾಲಿಗೆ ಚಾಲನೆ ನೀಡಿ, ಬಂದ್‌ಗೆ ಸಹಕರಿಸುವಂತೆ ಕೋರಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಭದ್ರಾ ಡ್ಯಾಂ, ಭದ್ರಾ ಡ್ಯಾಂನ ಬಲದಂಡೆ ನಾಲೆ ಬಳಿ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಬೇಕು. ಈ ಹಿನ್ನೆಲೆ ಜೂ.28ರಂದು ದಾವಣಗೆರೆ ಬಂದ್‌ಗೆ ಕರೆ ನೀಡಿದ್ದೇವೆ. ಮಹಾಜನತೆ, ವ್ಯಾಪಾರಸ್ಥರು, ಕಚೇರಿಗಳು, ಅಂಗಡಿ, ಮುಂಗಟ್ಟುಗಳು, ವರ್ತಕರು ನಮ್ಮ ಹೋರಾಟಕ್ಕೆ ಕೈ ಜೋಡಿಸಿ, ಯಶಸ್ವಿಗೊಳಿಸಬೇಕು ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಧನಂಜಯ ಕಡ್ಲೇಬಾಳು, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ರಾಜು ವೀರಣ್ಣ, ಪ್ರವೀಣ ಜಾಧವ್‌ ಸೇರಿದಂತೆ ಅನೇಕರು ಬೈಕ್ ರ್ಯಾಲಿಯಲ್ಲಿದ್ದರು. ನಗರದ ವಿವಿಧೆಡೆ ಬೈಕ್ ರ್ಯಾಲಿ ಸಾಗಿತು.

- - -

(ಬಾಕ್ಸ್‌-1)

* ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಬಿದ್ದ ರೇಣುಗೆ ಗಾಯ ದಾವಣಗೆರೆ: ದಾವಣಗೆರೆ ಬಂದ್ ಶನಿವಾರ ಇರುವ ಹಿನ್ನೆಲೆ ಶುಕ್ರವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ವೇಳೆ ಪಾಲಿಕೆ ಎದುರಿನ ರೈಲ್ವೆ ಕೆಳಸೇತುವೆ ಬಳಿ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಚಾಲನೆ ಮಾಡುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ ಸಿಮೆಂಟ್ ರಸ್ತೆಗಳ ಮಧ್ಯೆ ಇರುವ ಅಂತರದಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಕೆಳಗೆ ಬಿದ್ದು, ಪೆಟ್ಟು ಮಾಡಿಕೊಂಡ ಘಟನೆ ನಡೆಯಿತು. ಪ್ರವಾಸಿ ಮಂದಿರ ಬಳಿಯಿಂದ ಶುರುವಾದ ಬೈಕ್ ರ್ಯಾಲಿ ವೇಳೆ ಬುಲೆಟ್ ಬೈಕನ್ನೇರಿದ್ದ ರೇಣುಕಾಚಾರ್ಯ ಬಳಿಕ ಎಲೆಕ್ಟ್ರಿಕ್‌ ಸ್ಕೂಟರ್‌ ಚಾಲನೆ ಮಾಡುತ್ತಿದ್ದರು. ಗಾಯಗೊಂಡ ರೇಣುಕಾಚಾರ್ಯರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ನೀಡಲಾಗಿದೆ.

- - -

(ಬಾಕ್ಸ್‌-2)* ಬಂದ್‌ಗೆ ಸಹಕರಿಸಲು ಬಿಜೆಪಿ ಮುಖಂಡರ ಮನವಿ

ದಾವಣಗೆರೆ ನಗರದಲ್ಲಿ ಜೂ.28ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ನೀಡಲಾಗಿದೆ. ಹಾಲು, ಆರೋಗ್ಯ, ತುರ್ತು ಸೇವೆ ಹೊರತುಪಡಿಸಿ, ಉಳಿದೆಲ್ಲ ಸೇವೆಗಳೂ ಬಂದ್ ಆಗಿರಲಿವೆ. ಹೋಟೆಲ್‌ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘ-ಸಂಸ್ಥೆ-ಸಂಘಟನೆಗಳು, ಸಾರ್ವಜನಿಕರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಶಾಲಾ-ಕಾಲೇಜುಗಳು, ಬೀದಿಬದಿ ವ್ಯಾಪಾರಸ್ಥರು, ತರಕಾರಿ, ಸೊಪ್ಪು, ಹೂವಿನ ವ್ಯಾಪಾರಸ್ಥರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಬಂದ್‌ಗೆ ಬೆಂಬಲಿಸಬೇಕು ಎಂದು ಮುಖಂಡರು ಕೋರಿದ್ದಾರೆ.

ಕಾಂಗ್ರೆಸ್‌ ವಿರೋಧ:

ಈ ಮಧ್ಯೆ ದಾವಣಗೆರೆ ಬಂದ್‌ಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ದಂಡು ದಾವಣಗೆರೆ ಬಂದ್‌ಗೆ ಮುಂದಾಗಿದ್ದರೆ, ಕಾಂಗ್ರೆಸ್ ಪಕ್ಷವು ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದೆ. ತನ್ನದೇ ಸರ್ಕಾರದಲ್ಲಿ ಆದ ಯೋಜನೆಗೆ ಬಿಜೆಪಿ ವಿರೋಧ ಮಾಡುತ್ತಿದೆಯೆಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ವಿಪಕ್ಷ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದೆ.

- - -

-(ಫೋಟೋ ಬರಲಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ