ಸರ್ಕಾರಿ ನೌಕರರ ನ್ಯಾಯಸಮ್ಮತ ಬೇಡಿಕೆಗೆ ಬೆಂಬಲ: ಶಾಸಕ ವೈದ್ಯ

KannadaprabhaNewsNetwork | Published : Jan 21, 2024 1:35 AM

ಸಾರಾಂಶ

ಸವದತ್ತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದವರು ಶನಿವಾರ ಮಿನಿ ವಿಧಾನಸೌಧದ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನೌಕರರ ಮನವಿ ಸ್ವೀಕರಿಸಿದ ಶಾಸಕ ವಿಶ್ವಾಸ ವೈದ್ಯ.

ಕನ್ನಡಪ್ರಭ ವಾರ್ತೆ ಸವದತ್ತಿ

ಸರ್ಕಾರಿ ನೌಕರರ ನ್ಯಾಯ ಸಮ್ಮತ ಬೇಡಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದವರು ಶನಿವಾರ ಮಿನಿ ವಿಧಾನಸೌಧದ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನೌಕರರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ನೀಡುವುದು ಅತ್ಯವಶ್ಯಕವಾಗಿದೆ. ಅದರಂತೆ ಸರ್ಕಾರಿ ನೌಕರರೆಂದ ಮೇಲೆ ಎಲ್ಲರಿಗೂ ಒಂದೆ ತೆರನಾದ ವ್ಯವಸ್ಥೆ ಇರಬೇಕಾಗಿದೆ. ಇದರಿಂದ ಎಲ್ಲರಿಗೂ ಹಳೆಯ ಪಿಂಚಣಿ ಯೋಜನೆಯನ್ನೇ ಮತ್ತೆ ಜಾರಿಗೊಳಿಸಲು ಮತ್ತು ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆನಂದಕುಮಾರ ಮೂಗಬಸವ ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲಿ 6 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರನ್ನು ಹೊಂದಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಏಕೈಕ ಬೃಹತ್ ಸಂಘಟನೆಯಾಗಿದೆ. ಸಂಘವು ರಾಷ್ಟ್ರ ಮತ್ತು ರಾಜ್ಯದಲ್ಲಿ ಎದುರಾದ ಅನೇಕ ಸಂಕಷ್ಟಗಳಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸಿ ಸರ್ಕಾರಕ್ಕೆ ಆರ್ಥಿಕ ನೆರವು ನೀಡುತ್ತಾ ಬಂದಿದೆ ಎಂದರು.

ಇಂತಹ ನೌಕರರ ಜೀವನಕ್ಕೆ ಅವಶ್ಯಕವಾಗಿರುವ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಿದೆ. ಹಳೆಯ ಪಿಂಚಣಿಯನ್ನು ಸರ್ಕಾರ ಮುಂದುವರಿಸದೆ ಇರುವುದರಿಂದ ಇಂದು ರಾಜ್ಯದಲ್ಲಿ 3 ಲಕ್ಷ ನೌಕರರ ಬದುಕು ಆತಂಕದಲ್ಲಿದೆ. ಇವರನ್ನು ಅವಲಂಬಿಸಿದ ಕುಟುಂಬಗಳು ಅತಂತ್ರವಾಗುವ ಸಾಧ್ಯತೆಗಳಿವೆ ಎಂದರು. ಸರ್ಕಾರವು ಕೂಡಲೇ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ನೌಕರ ಬದುಕಿಗೆ ಆಶ್ರಯ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ಸದಸ್ಯರು ನೌಕರರ ಭವನದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಕಾಲ್ನಡಿಗೆ ಮೂಲಕ ಮಿನಿವಿಧಾನಸೌಧ ತಲುಪಿ ಅಲ್ಲಿ ಶಾಸಕ ವಿಶ್ವಾಸ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪ್ರಧಾನ ಕಾರ್ಯದರ್ಶಿ ಈಶ್ವರ ಕಲಗೌಡರ, ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಬಿಇಒ ಮೋಹನ ದಂಡಿನ, ಇಓ ಯಶವಂತಕುಮಾರ, ಗ್ರೇಡ್-2 ತಹಸೀಲ್ದಾರ ಎಂ.ವಿ.ಗುಂಡಪ್ಪಗೋಳ, ಉಪತಹಸೀಲ್ದಾರ ಶಶಿರಾಜ ಒನಕಿ, ಸುರೇಶ ತುಪ್ಪದ, ಗಿರೀಶ ಮುನವಳ್ಳಿ, ಎಸ್.ಜಿ.ಶಿಂಗಾರಗೊಪ್ಪ, ಎ.ಕೆ.ಮುಲ್ಲಾ, ಎಮ್.ವಿ.ಕಾರದಗಿ, ಮಹಾಂತೇಶ ಮುಂಡರಗಿ, ಸೋಮು ಅಗಸಿಮನಿ, ಸುರೇಶ ಬೆಳವಡಿ, ರಾಮಣ್ಣ ಗುಡಗಾರ, ವಿ.ವಿ.ದೇವರಡ್ಡಿ ಹಾಗೂ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Share this article