ಕನ್ನಡಪ್ರಭ ವಾರ್ತೆ ಕೊಡೇಕಲ್
ಸುರಪುರ ಮತಕ್ಷೇತ್ರದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳು ಪೂರ್ಣವಾಗಬೇಕೆಂದರೆ ಮತ್ತೊಮ್ಮೆ ತಾವೆಲ್ಲರೂ ನರಸಿಂಹನಾಯಕ (ರಾಜುಗೌಡ) ಅವರನ್ನು ಗೆಲ್ಲಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ.ರಾಜೀವ ಹೇಳಿದರು.ಕೊಡೇಕಲ್ ಗ್ರಾಮದಲ್ಲಿ ಜರುಗಿದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ತಾಲೂಕಿನ ಸ್ಥಿತಿ ಹೇಗಿತ್ತು. ರಾಜೂಗೌಡ ಶಾಸಕರಾದ ಮೇಲೆ ಕ್ಷೇತ್ರ ಯಾವ ರೀತಿಯಲ್ಲಿ ಅಭಿವೃದ್ಧಿಯಾಗಿದೆ ಎಂಬುದನ್ನು ಹಿರಿಯರು ಇಂದಿನ ಯುವಕರಿಗೆ ಮನದಟ್ಟು ಮಾಡುವ ಕೆಲಸ ಮಾಡಬೇಕು. ಸದಾ ರೈತರ, ಕ್ಷೇತ್ರದ ಅಭಿವೃದ್ಧಿ ಕಾಳಜಿ ಮಾಡುವ ರಾಜೂಗೌಡ ವಿಧಾನಸೌಧ ಪ್ರವೇಶ ಮಾಡಿದರೆ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಉಚಿತ ಯೋಜನೆಗಳು ಕ್ಷೇತ್ರದ ಪ್ರತಿಯೊಬ್ಬರಿಗೆ ತಲುಪುತ್ತವೆ. ಇದು ರಾಜೂಗೌಡ ಬಯಸಿದ ಚುನಾವಣೆಯಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ದೇವರು ನೀಡಿರುವ ಚುನಾವಣೆಯಾಗಿದೆ ಎಂದರು.
ದೇಶದ ಪ್ರಧಾನಿಗಳ ಗಮನವು ಕೂಡ ಸುರಪುರ ಉಪಚುನಾವಣೆ ಫಲಿತಾಂಶದತ್ತ ಇದೆ. ಎಲ್ಲಾ ಸಮುದಾಯಗಳ ಧ್ವನಿಯಾಗಿರುವ ರಾಜೂಗೌಡ ನಿಜವಾದ ಜನನಾಯಕ ಎಂದು ಹೇಳಿದ ಅವರು, ಕಾಂಗ್ರೆಸ್‌ನ ಸುಳ್ಳು ಭರವಸೆಗಳಿಗೆ ಮಾರು ಹೋಗದೆ, ದೇಶದ ಸಂಪೂರ್ಣ ಅಭಿವೃದ್ಧಿಗೆ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತ್ತು ಸುರಪುರ ಉಪಚುನಾವಣೆ ಬಜೆಪಿ ಅಭ್ಯರ್ಥಿ ರಾಜೂಗೌಡರನ್ನು ಬಹುಮತ ನೀಡಿ ಚುನಾಯಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಮಾತನಾಡಿ, ನಿಮ್ಮಗಳ ಸೇವೆ ಮಾಡಲು ದೇವರು ನನಗೆ 5 ವರ್ಷಗಳ ಮುಂಚೆಯೇ ಮತ್ತೇ ಅವಕಾಶ ನೀಡಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ, ಈ ಹಿಂದೆ ಆಗಿರುವ ಹಲವು ಕಹಿಘಟನೆ ಮರೆತು ಒಗ್ಗಾಟ್ಟಾಗಿ ಬಿಜೆಪಿ ಗೆಲುವಿಗೆ ಶ್ರಮಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸೋಣ ಎಂದರು.
ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ, ಎಚ್.ಸಿ. ಪಾಟೀಲ್, ಮೇಲಪ್ಪ ಗುಳಗಿ, ರಾಯಪ್ಪ ಜೋಗಿನ್, ಗದ್ದೆಪ್ಪ ಪೂಜಾರಿ, ವೆಂಕಟೇಶ ಸಾಹುಕಾರ, ಸೇರಿದಂತೆ ರಾಜನಕೋಳುರು ಮತ್ತು ಕೊಡೇಕಲ್ ಜಿ.ಪಂ. ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಇದ್ದರು. ಮೇಲಪ್ಪ ಗುಳಗಿ ನಿರೂಪಿಸಿ, ವಂದಿಸಿದರು.