ರಾಮನಗರ: ಜಿಲ್ಲೆಯನ್ನು ಕುಷ್ಠರೋಗ ಮುಕ್ತವನ್ನಾಗಿಸಲು ನಾಗರಿಕರು ಸಹಕರಿಸುವಂತೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಮಂಜುಳಾ ಕರೆ ನೀಡಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕುಮಾರ್ ಮಾತನಾಡಿ, ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಜನವರಿ 30ರಿಂದ ಫೆಬ್ರವರಿ 13ರವರೆಗೆ ಜಿಲ್ಲಾದ್ಯಂತ ನಡೆಯಲಿದೆ ಎಂದು ಹೇಳಿದರು.
ಕುಷ್ಠ ರೋಗ ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಹರಡುತ್ತದೆ. ದೇಹದ ಮೇಲೆ ಯಾವುದೇ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಾಣಿಸುವುದು, ಕೈಕಾಲುಗಳಲ್ಲಿ ಜೋಮು ಹಿಡಿದು ಸ್ಪರ್ಶ ಜ್ಞಾನವಿಲ್ಲದಿರುವುದು, ಕೈಕಾಲುಗಳಲ್ಲಿ ಹಾಗೂ ಮುಖದಲ್ಲಿ ಎಣ್ಣೆ ಸವರಿದಂತೆ ಹೊಳಪು ಇರುವುದು ರೋಗಲಕ್ಷಣವಾಗಿರುತ್ತದೆ. ಈ ರೋಗಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ರೋಗವನ್ನು ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದೆಂದು ತಿಳಿಸಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾ ಮಾತನಾಡಿ, ಕುಷ್ಠರೋಗಕ್ಕೆ ಅಂಟಿರುವ ಕಳಂಕವನ್ನು ಹೋಗಲಾಡಿಸಲು ಬದ್ಧರಾಗಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಬೇಕು. ಮಹಾತ್ಮ ಗಾಂಧೀಜಿಯವರ ಕನಸಾದ ಕುಷ್ಠರೋಗ ಮುಕ್ತ ಭಾರತ ಕಟ್ಟಲು ಕಾಯಾ, ವಾಚಾ, ಮನಸಾ ಶ್ರಮಿಸಬೇಕೆಂದು ಪ್ರತಿಜ್ಞಾವಿಧಿ ಬೋಧಿಸಿದರು.
(ಫೋಟೋ)
ರಾಮನಗರ ಜಿಲ್ಲಾ ಪಂಚಾಯತ್‌ನ ಮಿನಿ ಸಭಾಂಗಣದಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಕಾರ್ಯಕ್ರಮ ನಡೆಯಿತು.