- ಎಐಡಿಎಸ್ಒ ನೇತೃತ್ವದಲ್ಲಿ ಅರಶಿನಘಟ್ಟ, ಗಾಳಿಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ 16 ಗ್ರಾಮಗಳ ಸರ್ಕಾರಿ ಹಿರಿಯ ಮತ್ತು ಕಿರಿಯ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಶಾಲೆಗೆ ಸೇರಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ತಾಲೂಕಿನ ಅರಶಿನಘಟ್ಟ ಮತ್ತು ಗಾಳಿಹಳ್ಳಿ ಗ್ರಾಮಸ್ಥರು ಎಐಡಿಎಸ್ಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಕ್ರಮ ಖಂಡಿಸಿ ಮಾತನಾಡಿದ ಎಐಡಿಎಸ್‌ಒ ಸಂಘಟನೆ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ಪ್ರತಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಶಾಲೆ ಅಗತ್ಯವಾಗಿ ಬೇಕಾಗಿದೆ. ಒಂದೇ ಮಗುವಿದ್ದರೂ ಶಾಲೆಯನ್ನು ನಡೆಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. 5 ಕಿ.ಮೀ. ವ್ಯಾಪ್ತಿಯಲ್ಲಿನ ಶಾಲೆಗಳನ್ನು ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಿಸಲಾಗುತ್ತಿದೆ. ಕೆ.ಪಿ.ಎಸ್. ಶಾಲೆಗಳನ್ನು ಹೊರಗುತ್ತಿಗೆ ಕೊಡಲಿದೆ. ಪ್ರತಿ ಶಾಲೆಯಿಂದ ಆದಾಯ ಸಂಗ್ರಹಿಸಬೇಕೆಂದು ಸರ್ಕಾರ ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ಸರ್ಕಾರ ಆದೇಶದಲ್ಲಿ ತಿಳಿಸಿದಂತೆ ಮ್ಯಾಗ್ನೆಟ್ ಯೋಜನೆ ನಿರ್ಧಾರ ಹಿಂದಕ್ಕೆ ಪಡೆಯುವವರೆಗೂ ಹೋರಾಟವನ್ನು ನಡೆಸಲಾಗುವುದು. ಈ ಬಗ್ಗೆ ಗ್ರಾಮಗಳಲ್ಲಿ ಸಾರ್ವಜನಿಕ ಶಿಕ್ಷಣವನ್ನು ಉಳಿಸಿ ಎಂಬ ಸಮಿತಿಯನ್ನು ರಚಿಸಿರುವುದಾಗಿಯೂ ಹೇಳಿದರು.
- - -
(ಬಾಕ್ಸ್) * ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶ ಮಾಡಿದೆ ಎಂದು ಎಐಡಿಎಸ್‌ಒ ವತಿಯಿಂದ ಗಾಳಿಹಳ್ಳಿ, ಅರಶೀನಘಟ್ಟ ಗ್ರಾಮಗಳಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರದಿಂದ ನಮಗೆ ಯಾವುದೇ ಪ್ರಸ್ತಾವನೆಗಳಾಗಲಿ, ಆದೇಶಗಳಾಗಲಿ ಬಂದಿಲ್ಲ. ಸರ್ಕಾರದಲ್ಲಿ ಶಾಲೆ ಮುಚ್ಚುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಮಾಹಿತಿ ತಿಳಿಯದೇ ಪ್ರತಿಭಟನೆ ನಡೆಸುವುದು ಸರಿಯಲ್ಲ.-ಎಲ್.ಜಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಗಿರಿ ತಾಲೂಕು. - - -