ಹಿರೇಕೆರೂರು: ಸ್ವಾತಂತ್ರ‍್ಯ ನಂತರ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿರುವ ಕಾಂಗ್ರೆಸ್, ಆರೂವರೆ ದಶಕಗಳ ಕಾಲ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಕೇವಲ ಉದ್ಯಮಿಗಳ ಹಿತ ಕಾಯುತ್ತಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಆರೋಪಿಸಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಕೈಗೆ ಸಿಗುವ ಮತ್ತು ಸಿಗದ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ತಮ್ಮ ಕೈಗೆ ಸಿಗುವರು. ಇನ್ನೂ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಮ್ಮಿಂದ ದೂರದಲ್ಲಿದ್ದು ಆಡಳಿತ ಮಾಡಲು ಬಯಸುತ್ತಾರೆ. ನಿಮ್ಮ ಮತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಇದ್ದರೆ ನನಗೂ ಬಲ ನೀಡಿದಂತಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ನಿಂಗಪ್ಪ ಚಳಗೇರಿ ಮಾತನಾಡಿದರು. ಬಳಿಕ ಸುತ್ತಕೋಟಿ, ಚಿಕ್ಕಯಡಚಿ, ತಿಪ್ಪಾಯಿಕೊಪ್ಪ ಮತ್ತು ಹಳ್ಳೂರ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು.ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠಕ್ಕೆ ಭೇಟಿ ನೀಡಿದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಶಾಸಕರಾದ ಯು.ಬಿ. ಬಣಕಾರ ಅವರನ್ನು ವಿರೂಪಾಕ್ಷ ಮಹಾಸ್ವಾಮಿಗಳು ಸನ್ಮಾನಿಸಿದರು. ಇದಕ್ಕೂ ಮುನ್ನ ಉಭಯ ನಾಯಕರನ್ನು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ ಹಾಗೂ ಪಿ.ಡಿ. ಬಸನಗೌಡ್ರ, ಪಿ.ಕೆ. ನೀರಲಕಟ್ಟಿ, ಷಣ್ಮುಖಯ್ಯ ಮಳಿಮಠ, ಶಶಿಕಲಾ ಹಾದ್ರಿಹಳ್ಳಿ, ಮಲ್ಲಿಕಾರ್ಜುನ ಬುರಡಿಕಟ್ಟಿ, ಸುಭಾಷ್ ತಿಪ್ಪಣ್ಣನವರ, ಮಹೇಶ ಗುಬ್ಬಿ, ಹನುಮಂತಗೌಡ ಭರಮಗೌಡ್ರ, ಜ್ಯೋತಿ ಜಾಧವ್ ಇದ್ದರು.