ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್‌ಗೆ ಬೆಂಬಲ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Sep 10, 2024, 01:43 AM IST
20 | Kannada Prabha

ಸಾರಾಂಶ

ಈ ಹಿಂದೆ ಪುರಸಭೆಯಲ್ಲಿ ಗುಂಪುಗಾರಿಕೆ ಜೊತೆಗೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿತ್ತು. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ತಂತ್ರಗಾರಿಕೆ ನಡೆಸುವುದರೊಂದಿಗೆ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಒಂದೇ ಉದ್ದೇಶದಿಂದ ತೀರ್ಮಾನ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕಳೆದ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಜೊತೆಗೆ ಪಟ್ಟಣವನ್ನು ನಗರಸಭೆಯಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ನಡೆದ ಪ್ರಕ್ರಿಯೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಶಾಸಕ ಕೆ.ಎಂ. ಉದಯ್ ಸೋಮವಾರ ಹೇಳಿದರು.

ಪುರಸಭೆ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪುರಸಭೆಯಲ್ಲಿ ಗುಂಪುಗಾರಿಕೆ ಜೊತೆಗೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿತ್ತು. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ತಂತ್ರಗಾರಿಕೆ ನಡೆಸುವುದರೊಂದಿಗೆ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಒಂದೇ ಉದ್ದೇಶದಿಂದ ತೀರ್ಮಾನ ಕೈಗೊಂಡಿದೆ ಎಂದರು.

ಪುರಸಭೆಯಲ್ಲಿ ಇನ್ನು ಮುಂದೆ ಯಾವುದೇ ಹೊಂದಾಣಿಕೆ ರಾಜಕೀಯ ನಡೆಯುವುದಿಲ್ಲ. ಚುನಾವಣೆಯಲ್ಲಿ ಯಾವುದೇ ಜೆಡಿಎಸ್ ಸದಸ್ಯರನ್ನು ಹೈಜಾಕ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಹಿಂದೆ ಪುರಸಭೆಯಲ್ಲಿ ಅಧಿಕಾರ ನಡೆಸಿದ ಜೆಡಿಎಸ್‌ನ ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿದ ಕಾರಣ ಇಡೀ ಪಟ್ಟಣ ಅಧೋಗತಿಗೆ ಸಾಗಿತ್ತು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ದೃಷ್ಟಿಕೋನ ಇಟ್ಕೊಂಡು ಜೆಡಿಎಸ್ ಕಾಂಗ್ರೆಸ್ ಬೆಂಬಲ ನೀಡಿದೆ ಎಂದರು.

ಜೆಡಿಎಸ್ 6 ಮಂದಿ ಸದಸ್ಯರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದಾರೆ. ಜೆಡಿಎಸ್- ಬಿಜೆಪಿ ಆಂತರಿಕ ಭಿನ್ನಮತ ಏನಿದೆಯೋ ನಮಗೆ ಗೊತ್ತಿಲ್ಲ. ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಸದಸ್ಯರು ಬಾಹ್ಯ ನೀಡಿದ್ದಾರೆ.

ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ತುಂಬು ಹೃದಯದ ಸ್ವಾಗತ ಭಯಸುತ್ತೇನೆ ಎಂದರು.

ಈ ವೇಳೆ ಮನ್ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚೆಲುವರಾಜು, ತಾಪಂ ಮಾಜಿ ಸದಸ್ಯ ಕೆ.ಆರ್. ಮಹೇಶ್ ಸೇರಿದಂತೆ ಹಲವು ಮುಖಂಡರು ಇದ್ದರು.

ಹೆದರಿ ಸಂಸದ ಕುಮಾರಸ್ವಾಮಿ ಚುನಾವಣೆಗೆ ಗೈರು: ಕೆ.ಎಂ.ಉದಯ್ ಲೇವಡಿ

ಮದ್ದೂರು:

ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಮುಖಭಂಗವಾಗುತ್ತದೆ ಎಂದು ಹೆದರಿ ಸಂಸದ ಕುಮಾರಸ್ವಾಮಿ ಚುನಾವಣಾ ಪ್ರಕ್ರಿಯೆಗೆ ಗೈರು ಹಾಜರಾಗಿದ್ದಾರೆ ಎಂದು ಶಾಸಕ ಕೆ.ಎಂ. ಉದಯ್ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಜೆಡಿಎಸ್‌ಗೆ ಹೆಚ್ಚಿನ ಬಹುಮತ ಬಂದಿರಬಹುದು. ಆದರೆ, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿ ಯಾವುದೇ ಚುನಾವಣೆಯಲ್ಲಿ ಇಂತಹ ಫಲಿತಾಂಶ ಪುನರಾವರ್ತನೆಯಾಗುವುದಿಲ್ಲ ಎಂದರು.

ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಪಕ್ಷದವರಿಂದಲೇ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯುತ್ತಿದೆ ಎಂಬುದನ್ನು ಅರಿತಿರುವ ಸಂಸದ ಕುಮಾರಸ್ವಾಮಿ ಹಾಗೂ ಆ ಪಕ್ಷದ ನಾಯಕರು ಹೆದರಿ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂದು ವ್ಯಂಗ್ಯವಾಡಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ