ಕನ್ನಡಪ್ರಭ ವಾರ್ತೆ ಹಾವೇರಿ
ಜಿಪಂ ಮಾಜಿ ಸದಸ್ಯ ಹಾಗೂ ನಿಕಟಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಬೆಂಬಲಿಗರು, ಕಾರ್ಯಕರ್ತರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿರುವ ಕಚೇರಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಕಾರ್ಯಕರ್ತರು, ಸಿದ್ದರಾಜ ಅವರು ಸುಮಾರು ಮೂರು ದಶಕಗಳಿಂದಲೂ ವಿದ್ಯಾರ್ಥಿ ಪರಿಷತ್, ಬಿಜೆಪಿ, ಸಂಘ ಪರಿವಾರದ ಕೆಲಸ ಮಾಡುತ್ತಾ ಬಂದಿದ್ದಾರೆ. ನಾಲ್ಕು ವರ್ಷಗಳ ಕಾಲ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಯಶಸ್ವಿಯಾಗಿ ನಿಭಾಯಿಸಿದ್ದಾರಲ್ಲದೇ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಜನಪರ ಮನ್ನಣೆ ಗಳಿಸಿದ್ದಾರೆ ಎಂದರು.
ರಾಜಕೀಯ ಕುಟುಂಬದಿಂದಲೇ ಬಂದಿರುವ ಸಿದ್ದರಾಜ ಕಲಕೋಟಿ ಅವರ ಅಜ್ಜ ಕೂಡ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ನಡೆದ ಲೋಕಸಭೆ, ವಿಧಾನಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಹಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಅಲ್ಲದೇ ಬೇರೆ ಜಿಲ್ಲೆಗಳ ಚುನಾವಣಾ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿ ಹೊಂದಿದ್ದಾರೆ. ಇಂತಹ ಸಾಮಾಜಿಕ ಕಳಕಳಿವುಳ್ಳ ಸರಳ ವ್ಯಕ್ತಿತ್ವದರಾಗಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಈಗಲೂ ಪಕ್ಷದ ಸಂಘಟನೆಗೆ ದುಡಿಯುತ್ತಿರುವ ಸಿದ್ದರಾಜ ಕಲಕೋಟಿ ಅವರು ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ಆದರೆ, ಕೆಲವರು ಜಿಲ್ಲೆಯಲ್ಲಿ ಯಾವುದೇ ಪಕ್ಷ ಸಂಘಟನೆ ಮಾಡದೇ ಅಕ್ಕ ಪಕ್ಕದ ಜಿಲ್ಲೆಯಿಂದ ಅಭ್ಯರ್ಥಿಯಾಗಲು ಪ್ರಯತ್ನ ನಡೆಸಿದ್ದಾರೆ. ಅಂತವರಿಗೆ ಮನ್ನಣೆ ನೀಡದೇ ಜಿಲ್ಲೆಯಲ್ಲಿಯೇ ಪಕ್ಷಕ್ಕಾಗಿ ಹಗಲಿರಳು ದುಡಿಯುತ್ತಿರುವ ಸಿದ್ದರಾಜ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಮನವಿ ಸ್ವೀಕರಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿದ್ದರಾಜ ಕಲಕೋಟಿ ಮೊದಲಿನಿಂದಲೂ ಪರಿಚಯಸ್ಥರು. ವಿದ್ಯಾರ್ಥಿ ಜೀವನದಿಂದಲೇ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ನನಗೆ ಅವರ ಕೆಲಸದ ಬಗ್ಗೆ ಗೊತ್ತಿದೆ. ನಿಮ್ಮೆಲ್ಲರ ಆಶಯವನ್ನು ಕೇಂದ್ರದ ವರಿಷ್ಠರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಬಿಜೆಪಿ ಹಿರಿಯ ಮುಖಂಡ ಎಂ. ನಾಗರಾಜ, ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಬಿ. ಕಲಕೋಟಿ. ಆರ್.ಎಸ್. ವಾರಿಕಲ್‌ಮಠ, ಎಂ.ಎನ್. ಹುಲ್ಲೂರು, ನಿವೃತ್ತ ಪ್ರಾಚಾರ್ಯ ಯರಗುಪ್ಪಿ, ಬಸವರಾಜ ಕನವಳ್ಳಿ, ಮಹೇಶ ಸಜ್ಜನರ, ದಿನಕರ ಕೋರಿಶೆಟ್ಟರ, ಶಿವರಾಜ ಹೊಳಲ, ಬಸವರಾಜ ಮಾಸೂರು, ಈರಣ್ಣ ಅಂಗಡಿ, ಪರಶುರಾಮ ರಿತ್ತಿ, ಐ.ಜಿ. ಕೋರಿ, ನರೇಶ ಮಂತಟ್ಟಿ, ಮಲ್ಲಿಕಾರ್ಜುನ ಬಾಲೆಹೊಸೂರು, ಸಂಗಣ್ಣ ಹಿತ್ತಲಮನಿ, ಶಿವಾನಂದ ಅರಳಿ, ರಮೇಶ ಪಾಲನಕರ, ಈರಣ್ಣ ಅಂಗಡಿ, ವಿಜಯ ಗೊಂಬಿ, ಪವನಕುಮಾರ ಹೊಳಲ ಇತರರು ಇದ್ದರು.