ಸರ್ವೋಚ್ಛ ನ್ಯಾಯಾಲಯಕ್ಕೆ ಅಧಿಕಾರವೇ ಇಲ್ಲ: ಕಿರಣ್‌ಕುಮಾರ್

KannadaprabhaNewsNetwork |  
Published : Mar 24, 2026, 01:15 AM IST
೨೩ಕೆಎಂಎನ್‌ಡಿ-೨ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಅಸ್ಪೃಶ್ಯರಷ್ಟೇ ಪರಿಶಿಷ್ಟ ಜಾತಿಯವರೆಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಸ್ಪರ್ಶ ಸಮುದಾಯದವರನ್ನು ಪರಿಶಿಷ್ಟ ಜಾತಿಯಿಂದ ಹೊರಗಿಡುವ ಅಧಿಕಾರವೂ ಸುಪ್ರೀಂಕೋರ್ಟ್‌ಗೆ ಇಲ್ಲ. ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಅಂತರ್ ಹಿಂದುಳಿದಿರುವಿಕೆ ಅಂಶವನ್ನು ನಿಖರವಾಗಿ ಅರ್ಥೈಸಿಕೊಂಡು ವೈಜ್ಞಾನಿಕ ಒಳಮೀಸಲಾತಿ ಕಲ್ಪಿಸಲು ಎಂಪೆರಿಕಲ್ ದತ್ತಾಂಶ ಕ್ರೋಢೀಕರಿಸಲು ಕೇಂದ್ರದ ಜಾತಿ ಗಣತಿ ಮುಗಿದು ವರದಿ ಬಂದ ನಂತರ ರಾಜ್ಯದಲ್ಲಿ ಒಳಮೀಸಲಾತಿಗೆ ಕ್ರಮ ವಹಿಸುವಂತೆ ಹೇಳಿರುವುದಾಗಿ ನುಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಶೋಷಿತ ವರ್ಗಗಳ ಏಳಿಗೆಗಾಗಿ ಸಂವಿಧಾನಬದ್ಧವಾಗಿ ನೀಡಿರುವ ಮೀಸಲಾತಿ ಅವಕಾಶವನ್ನು ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಛಿದ್ರಗೊಳಿಸಿ ೧೦೧ ಪರಿಶಿಷ್ಟ ಸಮುದಾಯಗಳ ನಡುವೆ ಅಪಸ್ವರ, ಅಪನಂಬಿಕೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಆರೋಪಿಸಿದರು.

ರಾಜ್ಯದಲ್ಲಿ ಭೋವಿ, ಬಂಜಾರ, ಲಂಬಾಣಿ, ಕೊರಮ, ಕೊರಚ ಸಮುದಾಯಗಳು ಮೊದಲ ಬಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ರಚಿಸಿದ ೧೯೧೯ರ ಮಿಲ್ಲರ್ ಕಮಿಷನ್ ವರದಿಯಲ್ಲಿ ಶೋಷಿತ ವರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ನಂತರ ೧೯೩೫ರ ದೇಶದ ಮೊಟ್ಟಮೊದಲ ಪರಿಶಿಷ್ಟ ಜಾತಿಯಲ್ಲಿ ಹಾಗೂ ೧೯೫೦ರಲ್ಲಿ ಸಂವಿಧಾನಬದ್ಧವಾಗಿ ಕರ್ನಾಟಕವನ್ನು ಒಳಗೊಂಡು ಪ್ರಸ್ತುತ ದೇಶದ ಬಹುತೇಕ ರಾಜ್ಯಗಳಲ್ಲಿ ಈ ಸಮುದಾಯಗಳು ವಿವಿಧ ಪರ್ಯಾಯ ಹೆಸರುಗಳಿಂದ ಕರೆಯಲ್ಪಟ್ಟು ಪರಿಶಿಷ್ಟ ಜಾತಿ, ಪಂಗಡದ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಸ್ಪೃಶ್ಯರಷ್ಟೇ ಪರಿಶಿಷ್ಟ ಜಾತಿಯವರೆಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಸ್ಪರ್ಶ ಸಮುದಾಯದವರನ್ನು ಪರಿಶಿಷ್ಟ ಜಾತಿಯಿಂದ ಹೊರಗಿಡುವ ಅಧಿಕಾರವೂ ಸುಪ್ರೀಂಕೋರ್ಟ್‌ಗೆ ಇಲ್ಲ. ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಅಂತರ್ ಹಿಂದುಳಿದಿರುವಿಕೆ ಅಂಶವನ್ನು ನಿಖರವಾಗಿ ಅರ್ಥೈಸಿಕೊಂಡು ವೈಜ್ಞಾನಿಕ ಒಳಮೀಸಲಾತಿ ಕಲ್ಪಿಸಲು ಎಂಪೆರಿಕಲ್ ದತ್ತಾಂಶ ಕ್ರೋಢೀಕರಿಸಲು ಕೇಂದ್ರದ ಜಾತಿ ಗಣತಿ ಮುಗಿದು ವರದಿ ಬಂದ ನಂತರ ರಾಜ್ಯದಲ್ಲಿ ಒಳಮೀಸಲಾತಿಗೆ ಕ್ರಮ ವಹಿಸುವಂತೆ ಹೇಳಿರುವುದಾಗಿ ನುಡಿದರು.

ಪರಿಶಿಷ್ಟರ ಐಕ್ಯತೆಗೆ ಮರಣಶಾಸನವಾಗಿರುವ ಜಸ್ಟೀಸ್ ನಾಗಮೋಹನ್‌ದಾಸ್ ವರದಿಯಲ್ಲಿರುವ ಅಂಶಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಮಾ.೨೭ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತ ವಸ್ತುನಿಷ್ಠ ವರದಿ ರೂಪಿಸಲು ಉನ್ನತಮಟ್ಟದ ತಜ್ಞರ ಸಮಿತಿಯನ್ನು ರಚಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೇಮಕಾತಿ, ಬಡ್ತಿಗೆ ಸಂಬಂಧಿಸಿದಂತೆ ಡಿಪಿಆರ್ ವೃಂದ ಮತ್ತು ನೇಮಕಾತಿಗಾಗಿ ಇಲಾಖಾವಾರು ಒಟ್ಟಾರೆ ಖೇಡರ್ ಬೇಸ್ ವೃಂದದ ರೋಸ್ಟರ್ ಪದ್ಧತಿಯ ಬದಲು ರಾಜ್ಯದ ಎಲ್ಲಾ ಇಲಾಖೆಯ ಒಟ್ಟಾರೆ ಶ್ರೇಣಿವಾರು ಒಂದೇ ಘಟಕವನ್ನಾಗಿಸಬೇಕು. ರೋಸ್ಟರ್ ಬಿಂದುಗಳನ್ನು ಮರುನಿಗದಿಪಡಿಸಿ ಒಳಮೀಸಲಾತಿಯನ್ನು ಅನ್ವಯಿಸಬೇಕು. ಪ್ರತ್ಯೇಕ ಮೀಸಲಾತಿ ಜಾರಿ ಕೋಶ ಪ್ರಾರಂಭಿಸುವಂತೆ ಒತ್ತಾಯಿಸಿದರು.

ವೈಜ್ಞಾನಿಕ ಒಳ ಮೀಸಲು ಜಾರಿಯಾಗುವವರೆಗೂ ಹಳೆಯ ಮೀಸಲಾತಿ ಪದ್ಧತಿಯಂತೆ ಎಲ್ಲಾ ನೇಮಕಾತಿ ಹಾಗೂ ಶೈಕ್ಷಣಿಕ ಸೀಟುಗಳನ್ನು ಶೀಘ್ರವೇ ಭರ್ತಿ ಮಾಡುವಂತೆ ಆಗ್ರಹಿಸಿ ಮಾ.೨೭ರಂದು ಬೆಂಗಳೂರಿನ ಫ್ರೀಂಡಂಪಾರ್ಕ್‌ನಲ್ಲಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಗೋಷ್ಠಿಯಲ್ಲಿ ಟಿ.ಸಿ.ಗುರಪ್ಪ, ಅಂಕಯ್ಯ, ರಾಮಕೃಷ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಗಳಿಗೆ ಅನ್ಯಾಯ
ವಾಗಟ ಯೋಗಪುರಿ ವರದರಾಜಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ