ರಾಮನಗರ: ಒಳ ಮೀಸಲಾತಿಗೆ ಸಂಬಂಧಿಸಿದಂತೆ ಅವೈಜ್ಞಾನಿಕ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿರುವ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ತಿರಸ್ಕರಿಸಿ ಮರು ಸಮೀಕ್ಷೆ ನಡೆಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಬಲಗೈ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ನಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ವಾಟರ್ ಟ್ಯಾಂಕ್ ವೃತ್ತದಲ್ಲಿ ಭಾನುವಾರ ಸಂಜೆ ಸೇರಿದ ಒಕ್ಕೂಟದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಸದಸ್ಯರು, ಪಂಜುಗಳನ್ನು ಹಿಡಿದು ಎಂ.ಜಿ. ರಸ್ತೆ ಹಾಗೂ ಮುಖ್ಯರಸ್ತೆ ಮಾರ್ಗವಾಗಿ ಕೆಂಗಲ್ ಹನುಮಂತಯ್ಯ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಒಳ ಮೀಸಲಾತಿಯ ಅನ್ಯಾಯದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ಒಳ ಮೀಸಲಾತಿಗೆ ಕೋರ್ಟ್ ತಡೆಯಾಜ್ಞೆ, ರೋಸ್ಟರ್ ಬಿಂದುಗಳ ವಿಷಯದಲ್ಲಿನ ಗೊಂದಲಗಳು ಹಾಗೂ ಶೇ 56ರಷ್ಟು ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವವರೆಗೆ ಒಳ ಮೀಸಲಾತಿ ರಹಿತ ಶೇ 15+3ರಷ್ಟು ಮೀಸಲಾತಿ ಜಾರಿಗೊಳಿಸಿ ಫೆ. 27ರಂದು ಹೊರಡಿಸಿರುವ ಆದೇಶವನ್ನು ಬಲಗೈ ಸಮುದಾಯ ಸ್ವಾಗತಿಸಿದೆ ಎಂದರು.
ಒಳ ಮೀಸಲಾತಿಯು 101 ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗುವ ದೃಷ್ಟಿಯಿಂದ ಮೀಸಲಾತಿ ಪ್ರಮಾಣ ಹೆಚ್ಚಳ ಅನಿವಾರ್ಯ. ಆದರೆ, 101 ಜಾತಿಗಳ ಪೈಕಿ 01 ಜಾತಿಯ ಒತ್ತಡಕ್ಕೆ ಸರ್ಕಾರ ಮಣಿದು ಶೇ 15+3ರ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾದರೆ, ಬಲಗೈ ಸಮುದಾಯಗಳಿಗೆ ತುಂಬಾ ಅನ್ಯಾಯವಾಗುತ್ತದೆ. ಆಗ ಸರ್ಕಾರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿ ಮುಂದೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸರ್ಕಾರ ಈ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸದೆ ಎರಡೂ ಸಮುದಾಯಗಳಿಗೆ ಸಮಾನವಾಗಿ ಪಾಲು ಸಿಗುವಂತೆ ಮಾಡಬೇಕು. ಆ ನಿಟ್ಟಿನಲ್ಲಿ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಬಲಗೈ ಸಮುದಾಯದ ವಿವಿಧ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟವು ಮಾರ್ಚ್ 25ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಅಲ್ಲಿ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಗುವುದು. ಈ ಸಮಾವೇಶಕ್ಕೆ ಸಮುದಾಯದ ಜನರು ಒಕ್ಕೊರಲಿನಿಂದ ಬಂದು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮೆರವಣಿಗೆಯಲ್ಲಿ ದಲಿತ ಮುಖಂಡರಾದ ಗವಿಯಯ್ಯ, ಹರೀಶ್ ಬಾಲು, ವೆಂಕಟೇಶ್, ಪ್ರದೀಪ್ ಅಪ್ಪಗೆರೆ , ಕುಮಾರ್, ಹರೀಶ, ಹನುಮಂತಯ್ಯ ಮತ್ತೆಕೆರೆ, ಛಲವಾದಿ ಶೇಖರ್, ಕಿರಣ್ ಬಾಲು , ಮರಿಸ್ವಾಮಿ, ಬಸವರಾಜ್, ಸುರೇಶ್ ಮತ್ತಿತರರು ಭಾಗವಹಿಸಿದ್ದರು.
ಬಾಕ್ಸ್ .............
ಒಕ್ಕೂಟದ ಬೇಡಿಕೆಗಳೇನು?* ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು.
* ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿಅಂಶಗಳೊಂದಿಗೆ ನ್ಯಾ. ನಾಗಮೋಹನ್ ದಾಸ್ ಆಯೋಗದ ಅಂಕಿಅಂಶಗಳನ್ನು ಹೋಲಿಕೆ ಮಾಡಬೇಕು. ವ್ಯತ್ಯಾಸಗಳು ಕಂಡುಬಂದಲ್ಲಿ, ಮತ್ತೊಮ್ಮೆ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಮರು ಸಮೀಕ್ಷೆ ಕೈಗೊಳ್ಳಬೇಕು.* ರಾಜ್ಯ ಸರ್ಕಾರ 2025 ಸೆ. 3ರಂದು ಯಾವುದೇ ಮಾನದಂಡವನ್ನು ಅನುಸರಿಸದೆ ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶ ಹಿಂಪಡೆಯಬೇಕು.
* ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆ ಸಂಖ್ಯೆ ಸಕಇ/08/ಎಸ್ಎಲ್‌ಪಿ/2024(ಭಾಗ-5) ನಿರ್ದೇಶನದಂತೆ ಜಾತಿ ಪ್ರಮಾಣಪತ್ರಗಳನ್ನು ಪವರ್ಗ- ಎ, ಬಿ, ಸಿ ಎಂದು ವರ್ಗೀಕರಿಸಿರುವುದನ್ನು ಹಿಂಪಡೆಯಬೇಕು. ಮೂಲ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣಪತ್ರಗಳನ್ನು ನೀಡಲು ಆದೇಶಿಸಬೇಕು.* ಪರಿಶಿಷ್ಟ ಜಾತಿ ಸಮುದಾಯಕ್ಕೆ ಈಗಾಗಲೇ ನೀಡಿರುವ ಕಾಯಂ ಜಾತಿ ಪ್ರಮಾಣಪತ್ರಗಳನ್ನು ಹೊಸ ಜಾತಿ ಪ್ರಮಾಣಪತ್ರಗಳೊಂದಿಗೆ ಪರಿಗಣಿಸಲು ಆದೇಶ ಹೊರಡಿಸಬೇಕು.
* ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳನ್ನು ಬಲಗೈ ಗುಂಪಿನಲ್ಲಿ ಉದ್ಯೋಗ, ಶಿಕ್ಷಣ ಹಾಗೂ ಇತರ ಸೌಲಭ್ಯ ಪಡೆಯಲು ಆದೇಶ ಹೊರಡಿಸಬೇಕು.*ಚಿತ್ರದುರ್ಗ ಜಿಲ್ಲೆಯಲ್ಲಿ ಹೊಲಯ ಸಮುದಾಯ 223 ಎಂದು ನ್ಯಾ. ನಾಗಮೋಹನ್‌ದಾಸ್ ವರದಿಯಲ್ಲಿ ದಾಖಲಿಸಿರುವುದನ್ನು ಮರು ಪರಿಶೀಲಿಸಬೇಕು. ಉದ್ದೇಶಪೂರ್ವಕವಾಗಿ ಜನಸಂಖ್ಯೆ ಕಡಿಮೆ ಮಾಡಿರುವ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಲು ವಿಶೇಷ ತನಿಖಾ ತಂಡ ನೇಮಿಸಬೇಕು.
23ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಕರ್ನಾಟಕ ಬಲಗೈ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಪಂಜಿನ ಮೆರವಣಿಗೆ ನಡೆಸಿದರು.