ಅಬಕಾರಿ ಅಧಿಕಾರಿಗಳ ವಿರುದ್ಧ ಸುರೇಶ್‌ಗೌಡ ಗರಂ

KannadaprabhaNewsNetwork |  
Published : Dec 04, 2025, 01:15 AM IST

ಸಾರಾಂಶ

ತಾಲೂಕಿನಲ್ಲಿ ಕಾನೂನು ಬಾಹಿರವಾಗಿ 29 ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕ ಬಿ.ಸುರೇಶ್‌ಗೌಡರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ತಾಲೂಕಿನಲ್ಲಿ ಕಾನೂನು ಬಾಹಿರವಾಗಿ 29 ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕ ಬಿ.ಸುರೇಶ್‌ಗೌಡರು ಒತ್ತಾಯಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತುಮಕೂರು ತಾಲೂಕು ಮಟ್ಟದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವಲ್ಲಿ ಅಕ್ರಮ ನಡೆದಿದೆ. ಯಾವ ನಿಯಮದಡಿಯಲ್ಲಿ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಿದಿರಿ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ ಶಾಸಕರು ಗರಂ ಆದರು.

ತಾಲೂಕಿನಲ್ಲಿ ಈಗಾಗಲೇ 90 ಮದ್ಯದ ಅಂಗಡಿಗಳಿವೆ. ಅವುಗಳ ಜೊತೆಗೆ ಹೊಸದಾಗಿ 29 ಅಂಗಡಿಗಳಿಗೆ ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಸಭೆಯಲ್ಲಿ ಹೇಳಿದರು.

ತಾಲೂಕಿನ ವಿವಿಧ ವಿದ್ಯಾರ್ಥಿನಿಲಯಗಳಲ್ಲಿ 3 ಸಾವಿರ ಹೆಣ್ಣುಮಕ್ಕಳು, 2 ಸಾವಿರ ಬಾಲಕರಿದ್ದಾರೆ. ಪ್ರತಿ ತಿಂಗಳೂ ತಜ್ಞವೈದ್ಯರು ಹಾಸ್ಟೆಲ್‌ಗಳಿಗೆ ಹೋಗಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಮಾಡಬೇಕು. ಆದರೆ ಯಾವ ವೈದ್ಯರೂ ಆರೋಗ್ಯ ತಪಾಸಣೆಗೆ ಹಾಸ್ಟೆಲ್‌ಗಳಿಗೆ ಬರುತ್ತಿಲ್ಲ ಎಂಬ ದೂರುಗಳಿವೆ. ಇನ್ನುಮೇಲೆ ತಜ್ಞವೈದ್ಯರು ಕಡ್ಡಾಯವಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕು ಎಂದು ಶಾಸಕ ಸುರೇಶ್‌ಗೌಡರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಆಶ್ರಯ ಯೋಜನೆಯಲ್ಲಿ ತಾಲೂಕಿನಲ್ಲಿ 135 ಎಕರೆ ಜಮೀನು ಗುರುತಿಸಲಾಗಿದೆ. ಈ ಪೈಕಿ 44 ಎಕರೆ ಜಾಗ ಹಳ್ಳದಿಣ್ಣೆಗಳಿಂದ ಕೂಡಿದೆ. ಅಂತಹ ಜಮೀನು ಗುರುತಿಸಿ ಅಧಿಕಾರಿಗಳು ಬೇಜವಾಬ್ದಾರಿತನ ತೋರಿದ್ದಾರೆ ಎಂದು ಸಿಟ್ಟಿಗೆದ್ದ ಶಾಸಕರು, ಕೂಡಲೇ ನಿವೇಶನಗಳನ್ನು ವಿಂಗಡಿಸಿ ಸಿದ್ಧಪಡಿಸುವಂತೆ ತಿಳಿಸಿದರು.

ತಾಲೂಕಿನಲ್ಲಿ 184 ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಲಾಗಿದೆ. ಇನ್ನೂ 66 ಗ್ರಾಮಗಳ ಘೋಷಣೆ ಆಗಬೇಕಾಗಿರುವುದರಿಂದ ಆ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ತಹಸೀಲ್ದಾರರಿಗೆ ತಿಳಿಸಿದರು. ತಾಲೂಕಿನ 365 ಸ್ಮಶಾನಗಳನ್ನು ಗುರುತಿಸಲಾಗಿದೆ. ಈ ಪೈಕಿ 96 ಸ್ಮಶಾನಗಳ ಪಹಣಿ ಆಗಿದ್ದು, ಉಳಿದ ಸ್ಮಶಾನಗಳ ಪಹಣಿಗೆ ಕ್ರಮ ತೆಗೆದುಕೊಳ್ಳಲು ಕಂದಾಯ ಅಧಿಕಾರಿಗಳಿಗೆ ತಿಳಿಸಿದರು.

ಬಿಇಒ ಅಮಾನತಿಗೆ ಸೂಚನೆ....

ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಿದೆ. ಫಲಿತಾಂಶ ಸುಧಾರಣೆಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸುರೇಶ್‌ಗೌಡರು ಬಿಇಒ ಹನುಮಂತಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಅವರನ್ನು ಸೇವೆಯಿಂದ ಅಮಾನತು ಮಾಡಲು ಮೇಲಾಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು. ಹೆಬ್ಬೂರು, ನಾಗವಲ್ಲಿ, ಗುಳೂರು, ಚಿಕ್ಕಾಪುರ ಗ್ರಾಮಗಳ ಕೆರೆಗಳ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು. ಸಿರಿವರ, ಮಸ್ಕಲ್ ಶಾಲೆಗಳನ್ನು ಕೆಪಿಎಸ್ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಸೀಲ್ದಾರ್ ರಾಜೇಶ್ವರಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀನಾರಾಯಣ, ಆಡಳಿತಾಧಿಕಾರಿ ಶಾರದಮ್ಮ ಮತ್ತಿತರ ಅಧಿಕಾರಿಗಳ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

9ರಂದು ರೈತ ಸಂಘದಿಂದ ಬೆಳಗಾವಿ ಚಲೋ
ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾದುದು ಎಲ್ಲರ ಕರ್ತವ್ಯ