5ನೇ ಇಂಡಿಯನ್‌ ಓಪನ್‌ ಸರ್ಫಿಂಗ್‌: ಪುರುಷ, ಮಹಿಳಾ ವಿಭಾಗದಲ್ಲಿ ತಮಿಳುುನಾಡು ಮೇಲುಗೈ

KannadaprabhaNewsNetwork |  
Published : Jun 02, 2024, 01:46 AM IST
ಇಂಡಿಯನ್‌ ಒಪನ್‌ ಸರ್ಫಿಂಗ್‌ ಛಾಂಫಿಯನ್‌ ಶಿಪ್‌  | Kannada Prabha

ಸಾರಾಂಶ

ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ತಮಿಳುನಾಡಿನ ಕಮಲಿಮೂರ್ತಿ (11.23), ಗೋವಾದ ಸುಗರ್‌ ಬನರಸೆ (8.93),ನೇಹಾ ವ್ಯೆದ್‌ (2.20) ಹಾಗೂ ಮೇರಿಲ್ಲೆ ವಂಡರಿಂಕ್‌ (1.87) ಫೈನಲ್‌ ತಲುಪಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸಸಿಹಿತ್ಲುವಿನ ಮುಂಡಾ ಬೀಚ್‌ಲ್ಲಿ ನಡೆಯುತ್ತಿರುವ ಇಂಡಿಯನ್‌ ಓಪನ್‌ ಸರ್ಫಿಂಗ್‌ ಎರಡನೇ ದಿನದ ಸ್ಪರ್ಧೆಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಮಿಳುನಾಡು ಮೇಲುಗೈ ಸಾಧಿಸಿದೆ. ಪುರುಷರ ವಿಭಾಗದಲ್ಲಿ ನಾಲ್ವರು ಹಾಗೂ ಮಹಿಳೆಯರ ವಿಭಾಗದಲ್ಲಿ ತಮಿಳುನಾಡಿನ ಇಬ್ಬರು ಫೈನಲ್‌ ಪ್ರವೇಶಿಸಿದ್ದಾರೆ.

16 ರ ಕೆಳ ಹರೆಯದ ಬಾಲಕರ ವಿಭಾಗದಲ್ಲಿ ಮೂಲ್ಕಿ ಆಕಾಶ್‌ ಪೂಜಾರ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಪುರುಷರ ವಿಭಾಗದಲ್ಲಿ ತಮಿಳುನಾಡಿನ ಸಂಜಯ್‌ ಕುಮಾರ್‌ ಎಸ್‌ (11.17), ಸಂಜಯ್‌ ಸೆಲ್ವಮಣಿ (11.03), ಶ್ರೀಕಾಂತ್‌ ಡಿ (9.90) ಹಾಗೂ ಅಜೀಶ್‌ ಆಲಿ (9.73) ಫೈನಲ್‌ ತಲುಪಿದ್ದಾರೆ. ಮೊದಲನೇ ದಿನ ಉತ್ತಮ ಪ್ರದರ್ಶನ ನೀಡಿದ್ದ ಶಿವರಾಜ್‌ ಬಾಬು ಸೆಮಿಫೈನಲ್‌ನಲ್ಲಿ ನೀರಸಪ್ರದರ್ಶನ ನೀಡಿ ಫೈನಲ್‌ ತಲುಪುವಲ್ಲಿ ವಿಫಲರಾದರು.

ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ತಮಿಳುನಾಡಿನ ಕಮಲಿಮೂರ್ತಿ (11.23), ಗೋವಾದ ಸುಗರ್‌ ಬನರಸೆ (8.93),ನೇಹಾ ವ್ಯೆದ್‌ (2.20) ಹಾಗೂ ಮೇರಿಲ್ಲೆ ವಂಡರಿಂಕ್‌ (1.87) ಫೈನಲ್‌ ತಲುಪಿದ್ದಾರೆ.

16 ರ ಕೆಳ ಹರೆಯದ ಬಾಲಕರ ವಿಭಾಗದಲ್ಲಿ ತಾಯಿನ್‌ ಅರುಣ್‌ (7.60), ಪ್ರಹ್ಲಾದ್‌ ಶ್ರೀರಾಮ್‌ (7.17), ಮೂಲ್ಕಿಯ ಮಂತ್ರ ಸರ್ಫಿಂಗ್‌ ಕ್ಲಬ್‌ನ ಪೂಜಾರ್‌ ಸಹೋದರರಾದ ರಾಜು ಪೂಜಾರ್‌ (7.33), ಪ್ರದೀಪ್‌ ಪೂಜಾರ್‌ (6.47), ಆಕಾಶ್‌ ಪೂಜಾರ್‌ (5.80), ಯೋಗೀಶ್‌ ಎ. (4.40) ಮತ್ತು ಸೋಮು ಶೇಠಿ (4.40) ಸೆಮಿಫೈನಲ್‌ ತಲುಪಿದ್ದಾರೆ. ಭಾನುವಾರ ಪುರುಷರ, ಮಹಿಳೆಯರ ಮತ್ತು 16 ರ ಕೆಳ ಹರೆಯದ ಬಾಲಕರ ವಿಭಾಗದ ಫೈನಲ್‌ ಪಂದ್ಯ ನಡೆಯಲಿದೆ.

ಇವತ್ತು ಒಳ್ಳೆಯ ವಾತಾವರಣವಿದ್ದು ಸಮುದ್ರದ ಅಲೆಗಳು ಸವಾಲಾಗಿತ್ತು. ಅದನ್ನು ಉತ್ತಮ ರೀತಿಯಲ್ಲಿ ಎದುರಿಸಿದ್ದೇನೆ. ಸ್ವಲ್ಪ ಒತ್ತಡವಿತ್ತು. ಫೈನಲ್‌ನಲ್ಲಿ ನನ್ನ ನ್ಯೆಜ ಸಾಮರ್ಥ್ಯವನ್ನು ಪ್ರದರ್ಶಿಸಿ ಗೆಲುವಿಗೆ ಪ್ರಯತ್ನಿಸುತ್ತೇನೆ

- ಸಂಜಯ್‌ ಕುಮಾರ್‌ ಎಸ್‌., ತಮಿಳುನಾಡು, ಪುರುಷರ ವಿಭಾಗದ ಫೈನಲ್‌ ಸ್ಪರ್ಧೆಯ ಟಾಪರ್‌

----

ಇಂದಿನ ಸ್ಪರ್ಧೆಯು ತುಂಬಾ ಕ್ಲಿಷ್ಟಕರವಾಗಿದ್ದು ಸಮುದ್ರದ ಅಲೆಗಳು ಮೇಲಿಂದ ಮೇಲೆ ಬರುತ್ತಿದ್ದರಿಂದ ಸ್ವಲ್ಪ ಕಷ್ತವಾಗಿತ್ತು. ನನಗೆ ಯಾವುದೇ ಒತ್ತಡವಿಲ್ಲ. ಫೈನಲ್‌ ಪಂದ್ಯದಲ್ಲಿ ನನ್ನ ಚಾಂಪಿಯನ್‌ ಶಿಪ್‌ ಉಳಿಸಿಕೊಳ್ಳಲು ಗಮನಹರಿಸುತ್ತೇನೆ

- ಕಮಲಿಮೂರ್ತಿ ತಮಿಳುನಾಡು, ಮಹಿಳೆಯರ ವಿಭಾಗದ ಟಾಪರ್‌

ಮೂಲ್ಕಿಯ ಪೂಜಾರ್‌ ಸಹೋದರರು

ಸಸಿಹಿತ್ಲು ಮುಂಡಾ ಬೀಚ್‌ ಬಳಿಯ ಮೂಲ್ಕಿ ಶಾಂಭವಿ ನದಿ ತೀರದ ಕೊಳಚಿಕಂಬಳದಲ್ಲಿರುವ ಮೂಲ್ಕಿಯ ಮಂತ್ರ ಸರ್ಫಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿರುವ ಮೂಲ್ಕಿ ಪೂಜಾರ್‌ ಸಹೋದರರು ಸರ್ಫಿಂಗ್‌ನಲ್ಲಿ ಮಿಂಚುತ್ತಿದ್ದಾರೆ.

ಆಕಾಶ್ ಪೂಜಾರ್, ರಾಜು ಪೂಜಾರ್ ಮೂಲ್ಕಿ ಮೆಡಲಿನ್ ಶಾಲೆ ವಿದ್ಯಾರ್ಥಿಗಳು ಹಾಗೂ ವಿಜಯಾ ಕಾಲೇಜಿನ ಹನುಮಂತ ಪೂಜಾ‌ರ್, ಚಿತ್ರಾಪು ಶಾಲೆ ವಿದ್ಯಾರ್ಥಿ ಪ್ರದೀಪ್ ಪೂಜಾ‌ರ್ ಅವರು ಸ್ಥಳೀಯ ಭಾಗದ ಭರವಸೆಯ ಯುವ ಸರ್ಫರ್‌ಗಳಾಗುವ ನಿರೀಕ್ಷೆ ಮೂಡಿಸಿದ್ದಾರೆ. ಅಕಾಶ್‌ ಪೂಜಾರ್ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದಾರೆ. ಬಾದಾಮಿ ಮೂಲದ ಇವರು ಸಹೋದರ ಸಂಬಂಧಿಗಳಾಗಿದ್ದು ಮೂಲ್ಕಿಯಲ್ಲಿ ಪೂಜಾರ್ ಸಹೋದರರು ಎಂದೇ ಪ್ರಸಿದ್ಧರಾಗಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ