ಶಸ್ತ್ರ ಚಿಕಿತ್ಸಾ ಶಿಬಿರ ಮಕ್ಕಳನ್ನು ಸುಂದರಗೊಳಿಸಿ ಪೋಷಕರ ನೋವು ದೂರ ಮಾಡುತ್ತದೆ: ಯು.ಟಿ.ಖಾದರ್

KannadaprabhaNewsNetwork |  
Published : Oct 28, 2026, 01:45 AM IST
27ಕೆಎಂಎನ್ ಡಿ19,20 | Kannada Prabha

ಸಾರಾಂಶ

ಆದಿಚುಂಚನಗಿರಿ ಮಠವು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದಡಿ ಸಮಾಜದ ಎಲ್ಲಾ ವಲಯಗಳಿಗೆ ಬೇಕಾದ ಸೇವೆಗಳನ್ನು ಒಟ್ಟುಗೂಡಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶದದಲ್ಲಿರುವ ಶ್ರೀಮಠದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಈ ಉಚಿತ ಶಸ್ತ್ರಚಿಕಿತ್ಸಾ ಶಿಬಿರವು ನಿಜವಾಗಿಯೂ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದಿಚುಂಚನಗಿರಿ ಶ್ರೀಮಠದಿಂದ ನಡೆಯುತ್ತಿರುವ ವಿರೂಪಗಳಿಗೆ ಉಚಿತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಕ್ಕಳಿಗೆ ನೀಡಲಾಗುವ ಈ ಚಿಕಿತ್ಸೆಯು ಅವರನ್ನು ಸುಂದರಗೊಳಿಸುವುದಲ್ಲದೇ, ಪೋಷಕರ ಮಾನಸಿಕ ವೇದನೆ ಹಾಗೂ ನೋವನ್ನು ಉಪಶಮನ ಮಾಡುವ ಪುಣ್ಯದ ಕೆಲಸವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ರೋಟಾಪ್ಲಾಸ್ಟ್ ಇಂಟರ್‌ನ್ಯಾಷನಲ್ ಮತ್ತು ರೋಟರಿ ಬೆಂಗಳೂರು ಉತ್ತರ ವಲಯದ ಸಹಯೋಗದೊಂದಿಗೆ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಜಿ.ಎಸ್ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸೀಳು ತುಟಿ, ಸೀಳು ಅಂಗುಳ ಹಾಗೂ ಸುಟ್ಟ ಗಾಯಗಳಿಂದಾದ ವಿರೂಪಗಳಿಗೆ ಉಚಿತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಆದಿಚುಂಚನಗಿರಿ ಮಠವು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದಡಿ ಸಮಾಜದ ಎಲ್ಲಾ ವಲಯಗಳಿಗೆ ಬೇಕಾದ ಸೇವೆಗಳನ್ನು ಒಟ್ಟುಗೂಡಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶದದಲ್ಲಿರುವ ಶ್ರೀಮಠದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಈ ಉಚಿತ ಶಸ್ತ್ರಚಿಕಿತ್ಸಾ ಶಿಬಿರವು ನಿಜವಾಗಿಯೂ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶ್ಲಾಘಿಸಿದರು.

ಪ್ರಥಮವಾಗಿ ಈ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಸ್ಮರಿಸುತ್ತೇನೆ. ಅವರು ನೀಡಿದ ಸ್ಪಷ್ಟ ಸಂದೇಶವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮುನ್ನಡೆಸಿಕೊಂಡು ಹೋಗಲು ನಿರ್ಮಲಾನಂದನಾಥ ಸ್ವಾಮೀಜಿ ಸಂಪೂರ್ಣ ಸಶಕ್ತರಾಗಿದ್ದಾರೆ ಎಂದರು.

ಗ್ರಾಮೀಣ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣ ಕೇಂದ್ರ ಹಾಗೂ ಸುಸಜ್ಜಿತ ಆಸ್ಪತ್ರೆಯನ್ನು ಸ್ಥಾಪಿಸಿ ಸುತ್ತಮುತ್ತಲ ಜನಸಾಮಾನ್ಯರಿಗೆ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿರುವುದು ಸಮಾಜಕ್ಕೆ ನೀಡುತ್ತಿರುವ ದೊಡ್ಡ ಕೊಡುಗೆಯಾಗಿದೆ. ಇಂದಿನ ದಿನಗಳಲ್ಲಿ ನಿಜವಾದ ದೇಶಾಭಿಮಾನ ಹಾಗೂ ಮಾನವೀಯತೆ ಸಿಗುವುದು ಶ್ರೀಗಳ ಸಾನ್ನಿಧ್ಯದಲ್ಲಿ ಮತ್ತು ಈ ಕ್ಷೇತ್ರದಲ್ಲಿ ಮಾತ್ರ ಎಂದು ಗರ್ವದಿಂದ ಹೇಳಬಯಸುತ್ತೇನೆ ಎಂದರು.

ಜನಸಾಮಾನ್ಯರ, ಹೆತ್ತವರ ನೋವು ಹಾಗೂ ಮಗುವಿನ ಕಷ್ಟವನ್ನು ಅರ್ಥ ಮಾಡಿಕೊಂಡು ಶ್ರೀ ನಿರ್ಮಲಾನಂದನಾಥ ಶ್ರೀಗಳು ಈ ಬೃಹತ್ ಶಿಬಿರದ ವ್ಯವಸ್ಥೆಯನ್ನು ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ. ಈ ಕಾರ್ಯಕ್ರಮವು ಸಮಾಜವನ್ನು ಸೌಹಾರ್ದತೆಯಿಂದ ಮುನ್ನಡೆಸಲು ಬೇಕಾದ ಮೂಲಭೂತ ಅಡಿಪಾಯವಾಗಿದೆ ಎಂದು ಬಣ್ಣಿಸಿದರು.

ಸಂಸ್ಥೆಗಳ ಕೊಡುಗೆಗೆ ಸಚಿವರ ಮೆಚ್ಚುಗೆ:

ರೊಟರಿ ಇಂಟರ್ ನ್ಯಾಷನಲ್, ರೊಟರಿ ಕ್ಲಬ್ ಹಾಗೂ ರೊಟೊಪ್ಲಾಸ್ಟ್ ಸಂಸ್ಥೆಗಳು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಮಕ್ಕಳಿಗೆ ಸೂಕ್ತವಾದ ಶಸ್ತ್ರಚಿಕಿತ್ಸೆ ನೀಡುವ ಮೂಲಕ ಕೇವಲ ಆಯಾ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಬೃಹತ್ ಮಟ್ಟದ ಉಡುಗೊರೆ ನೀಡಿವೆ ಎಂದು ಸಚಿವರು ಅಭಿನಂದಿಸಿದರು.

ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಮಾಜಕ್ಕೆ ಹೆಚ್ಚಿನ ರೀತಿಯ ಸಹಾಯ ಮಾಡುವ ಜೊತೆಗೆ, ಸೀಳು ತುಟಿ, ಸೀಳು ಅಂಗುಳ ಹಾಗೂ ಸುಟ್ಟ ಗಾಯಗಳಿಂದಾದ ವಿರೂಪಗಳಿಗೆ ಉಚಿತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆ ಸೇವೆ ಒದಗಿಸುವ ಮೂಲಕ ಶ್ರೀಮಠ ಬಡವರ ಸೇವೆಯೇ ನಿಜವಾದ ಸಮಾಜ ಸೇವೆಯಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಆದಿಚುಂಚನಗಿರಿ ಮಠದ ಹೆಸರನ್ನು ಇಂದು ದೇಶವಿದೇಶಗಳಲ್ಲೂ ಕೊಂಡಾಡುವಂತಾಗಿದೆ ಎಂದರು.

ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಹಾಕಿ ಕೊಟ್ಟ ದಿವ್ಯ ತಳಹದಿ ಹಾಗೂ ಮುಂದಾಲೋಚನೆ ಮೇಲೆಯೇ ಇಂದು ಶ್ರೀಮಠವು ಮುನ್ನಡೆಯುತ್ತಿದೆ. ಅವರು ಹಾಕಿದ ಅಡಿಪಾಯವನ್ನು ಇಂದಿನ ಪೀಠಾಧ್ಯಕ್ಷ ಶ್ರೀಗಳು ಅತ್ಯಂತ ನೈಪುಣ್ಯತೆಯಿಂದ ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಶ್ರೀಮಠವು ಶಿಕ್ಷಣ ಕ್ಷೇತ್ರದಲ್ಲಿ ಬಡ ಮಕ್ಕಳಿಗೆ ಹಾಗೂ ಪ್ರತಿಯೊಬ್ಬರಿಗೂ ಉಚಿತ ವಿದ್ಯಾದಾನ ಮಾಡುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಶ್ರೇಷ್ಠ ಮಟ್ಟದ ಕೆಲಸವನ್ನು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಈ ಮಠವು ಇನ್ನೂ ಅತ್ಯಂತ ಉಜ್ವಲವಾಗಿ ಬೆಳೆಯಲಿದೆ ಎಂದು ಶುಭ ಹಾರೈಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್, ಬೆಂಗಳೂರು ರೋಟರಿ ಜಿಲ್ಲಾ ಗವರ್ನರ್ ಎ.ಕೆ.ಎಸ್. ರೊ. ರವಿಶಂಕರ್ ಡಕೋಜು, ರೋಟೊಪ್ಲಾಸ್ಟ್ ಇಂಟರ್‌ನ್ಯಾ?ನಲ್ ವೈದ್ಯಕೀಯ ನಿರ್ದೇಶಕ ಡಾ. ಟಾಡ್ ಫಾರ್ನ್ವರ್ತ್, ಮಿಷನ್ ನಿರ್ದೇಶಕ ರೊ. ಬ್ರಿಯನ್ ವಾಕರ್, ಕಾರ್ಯನಿರ್ವಾಹಕ ನಿರ್ದೇಶಕ ರೊ. ಡೇನಿಯಲ್ ಡಿ. ಸಾಂಟೋ ಕಾರ್ಯಕ್ರಮ ಕುರಿತು ಮಾತನಾಡಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಆರ್.ಐ.ಯು.ಎಸ್.ಎ. ರೋಟರಿ ಬೆಂಗಳೂರು ಉತ್ತರ ಅಧ್ಯಕ್ಷ ರೊ.ಸಿ.ಮೋಹನ್ ವೇಲನ್, ಆದಿಚುಂಚನಗಿರಿ ವಿವಿ ಕುಲಪತಿ ಪ್ರೊ. ಎಸ್.ಎನ್. ಶ್ರೀಧರ, ಕುಲಸಚಿವ ಎಲ್. ಶ್ರೀಹರ್ಷ, ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಸೇರಿದಂತೆ ಹಲವು ಗಣ್ಯರು ಇದ್ದರು.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈನ್ ಬಸದಿಯ ಬಾಗಿಲು ತೆರೆಸುವಂತೆ ಮನವಿ
ಲೈಂಗಿಕ ದೌರ್ಜನ್ಯ ತಡೆ ಅಗತ್ಯ: ನ್ಯಾಯಾಧೀಶ ಭರತ್