ಸಂವಿಧಾನ ವಿರುದ್ಧ ಮಾತಾಡಿದವರನ್ನು ಬಿಜೆಪಿ ಉಚ್ಛಾಟಿಸಲಿ : ಸುರ್ಜೆವಾಲಾ

KannadaprabhaNewsNetwork | Updated : May 06 2024, 10:26 AM IST

ಸಾರಾಂಶ

 ಬಿಜೆಪಿ ನಾಯಕರು, ಮೊದಲು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವವರನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಆಗ್ರಹಿಸಿದರು.

  ಬೆಳಗಾವಿ :  ಸಂವಿಧಾನ ನಮ್ಮ ಧರ್ಮ ಗ್ರಂಥ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನಾಯಕರು, ಮೊದಲು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವವರನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಲ್ಲಿ 6 ನಾಯಕರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಲಲ್ಲು ಸಿಂಗ್‌, ಅರುಣ್‌ ಗೋವಿಲ್, ರಾಜಸ್ಥಾನದ ಜ್ಯೋತಿ ಮಿರ್ದಾ, ಆಚಾರ್ಯ ಪ್ರಮೋದ್‌, ಸಂಸದ ಅನಂತಕುಮಾರ್‌ ಹೆಗಡೆ, ಮೋಹನ್‌ ಭಾಗವತ್‌ ಸಂವಿಧಾನದ ವಿರುದ್ಧ ಮಾತನಾಡಿದವರು. ಅದರಲ್ಲಿ ಅನಂತಕುಮಾರ್‌ ಹೆಗಡೆ ಹಾಗೂ ಮೋಹನ ಭಾಗವತ್‌, ಆಚಾರ್ಯ ಪ್ರಮೋದ್‌ ಹೊರತುಪಡಿಸಿ ಇನ್ನುಳಿದ ಮೂರು ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಂವಿಧಾನವೇ ನಮ್ಮ ಗ್ರಂಥ ಎಂದು ತೋರಿಕೆಗೆ ಹೇಳದೆ, ಸಂವಿಧಾನದ ವಿರುದ್ಧವಾಗಿ ಮಾತನಾಡಿರುವ ಆರು ಜನರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಿ ನೋಡೋಣ ಎಂದು ಸವಾಲು ಹಾಕಿದರು.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮೂರು ಸಾವಿರದಷ್ಟು ವಿಡಿಯೋಗಳನ್ನು ಮಾಡಲಾಗಿದೆ. ಅಲ್ಲದೇ, ಅವರ ಕುಟುಂಬದಿಂದ ಓರ್ವ ಮಹಿಳೆಯನ್ನೂ ಅಪಹರಣ ಮಾಡಲಾಗಿದೆ. ಇವರ ವಿರುದ್ಧ ಸೂಕ್ತ ಕ್ರಮವಾಗಬೇಕು.

ಕಳೆದ 75 ವರ್ಷಗಳಲ್ಲಿ ದೇಶದ ಇತಿಹಾಸದಲ್ಲಿ ಇಂತಹದ್ದೊಂದು ಪ್ರಕರಣ ನಡೆದಿರಲಿಲ್ಲ. ಈ ಪ್ರಕರಣದ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೊಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ, ಈಗ ಪ್ರಜ್ವಲ್‌ ರೇವಣ್ಣ ಎಂಬ ಹೆಸರು ಬಳಸಲು ಯಾಕೆ ದೇಶದ ಪ್ರಧಾನಿ ಹೆದರುತ್ತಿದ್ದಾರೆ ಎಂದು ಪ್ರಶ್ನಿಸಿದ ಸುರ್ಜೇವಾಲಾ, ಈ ಪ್ರಕರಣದ ಸಂಬಂಧ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಪ್ರಮುಖ ಹತ್ತು ಪ್ರಶ್ನೆಗಳನ್ನು ಕೇಳಿದರು.

ಪ್ರಧಾನಿ ಮೋದಿಯವರು ಜೆಡಿಎಸ್​ ನಾಯಕ, ಓರ್ವ ಬಲಾತ್ಕಾರಿಗೆ ರಕ್ಷಣೆ ನೀಡುತ್ತಿದ್ದಾರೆ. ತಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗಂಭೀರವಾದ ಮತ್ತು ನೂರಾರು ಮಹಿಳೆಯರ ಮೇಲಿನ ದೌರ್ಜನ್ಯದ ಆರೋಪಿ ಎಂದು ಮೊದಲೇ ಗೊತ್ತಿತ್ತು. ಮೋದಿ, ಅಮಿತ್​ ಶಾ ಅವರಿಗೆ ಬಿಜೆಪಿ ನಾಯಕರೊಬ್ಬರು ಡಿಸೆಂಬರ್​ನಲ್ಲೇ ಎಲ್ಲ ಪುರಾವೆಗಳನ್ನು ಒದಗಿಸಿದ್ದರು. ಆದರೂ ಜೆಡಿಎಸ್​ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು ಯಾಕೆ? ಪ್ರಜ್ವಲ್ ರೇವಣ್ಣ ಅವರನ್ನು ಬಿಜೆಪಿ, ಜೆಡಿಎಸ್​ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದ್ದೇಕೆ?, ಪ್ರಜ್ವಲ್ ರೇವಣ್ಣರನ್ನು ಗೆಲ್ಲಿಸುವುದರಿಂದ ನನಗೆ ಶಕ್ತಿ ಬರುತ್ತದೆ ಎಂದು ಅವರ ಕೈಹಿಡಿದು ಮೋದಿ ಅವರು ಹೇಳಿದ್ದೇಕೆ? ಎಂದು ಪ್ರಶ್ನಿಸಿದರು.

Share this article