ಕಲಬುರಗಿ: ಪ್ರಾಗೈ ಇತಿಹಾಸ ಕಾಲದ ಲಕ್ಷಾಂತರ ವರ್ಷಗಳಿಂದ ಮಾನವ ನೆಲೆಗಳನ್ನು ಹೊಂದಿರುವ ಸುರಪುರಕ್ಕೆ ಭಾರತ ಉಪಖಂಡದಲ್ಲೇ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಪತ್ರಕರ್ತ, ಸಾಹಿತಿ ಹಾಗೂ ಅಂಕಣಕಾರ ಶ್ರೀನಿವಾಸ ಸಿರನೂರಕರ್ ಹೇಳಿದ್ದಾರೆ.
"ಸುರಪುರದ ಹತ್ತಿರವಿರುವ ಇಸಾಮಪುರ ವಿಶ್ವದ ಪುರಾತಾತ್ವಿಕ ಭೂಪಟದಲ್ಲಿ ಕಳಶಪ್ರಾಯವಾದ ಸ್ಥಾನ ಪಡೆದಿದ್ದು ಇಲ್ಲಿ ಪತ್ತೆಯಾಗಿರುವ ಅವಶೇಷಗಳಿಂದ ಇಲ್ಲಿಯ ಮಾನವ ನೆಲೆ 12 ಲಕ್ಷ ವರುಷಗಳಷ್ಟು ಪುರಾತನ ವಾದದ್ದು. ಇದು ಖಚಿತವಾಗಿ ತೇತ್ರಾ ಯುಗಕ್ಕೆ ಸೇರಿದ್ದು, ಇದು ರಾಮಾಯಣ ಪೂರ್ವಕಾಲದ್ದೋ ಅಥವಾ ನಂತರದ್ದೋ ಎಂಬುದು ನಿಷ್ಕರ್ಷೆಯಾಗಬೇಕಾಗಿದೆ " ಸಿರನೂರಕರ್ ವಿವರಿಸಿದರು.
ಬೂದಿಹಾಳ ಮಾನವ ನೆಲೆ ಮೂರು ಲಕ್ಷ ವರುಷಗಳಷ್ಟು ಪುರಾತನಾವಾಗಿದ್ದು, ದ್ವಾಪರ ಯುಗದ ಮಹಾಭಾರತಕ್ಕೂ ಪೂರ್ವದಾಗಿದ್ದು, ಕೊಡೇಕಲ್ ಮಾನವ ನೆಲೆ ೪೩೬೦ ವರುಷಗಳಷ್ಟು ಹಳೆಯದಾಗಿದೆ. ಇದು ಮಹಾಭಾರತ ಯುದ್ಧ ಕಾಲಕ್ಕೆ ಅತ್ಯಂತ ಸಮೀಪವಾದದ್ದು ಎಂದು ತಿಳಿಸಿದರು." ಸುರಪುರ ಪ್ರದೇಶವು ಆದಿ ಶಿಲಾಯುಗ, ಮಧ್ಯ ಶಿಲಾಯುಗ, ನೂತನ ಶಿಲಾಯುಗ, ತಾಮ್ರ ಯುಗ ಮತ್ತು ಕಬ್ಬಿಣ ಯುಗ- ಈ ಎಲ್ಲಾ ಯುಗಗಳಲ್ಲಿ ಲಕ್ಷಾಂತರ ವರುಷಗಳ ನಿರಂತರವಾಗಿ ಮಾನವ ನೆಲೆಗಳನ್ನು ಹೊಂದಿದ ಭಾರತ ಉಪಖಂಡದ ಅತ್ಯಂತ ವಿರಳ ಭೂ ಪರಿಸರದ ಪ್ರದೇಶವಾಗಿದೆ . ಇದಕ್ಕೆ ಮೂಲ ಕಾರಣ ಇಲ್ಲಿ ಲಭ್ಯವಿರುವ ಶಾಶ್ವತ ಮತ್ತು ಸಮೃದ್ಧ ಜಲ ಮೂಲಗಳು. ಇಲ್ಲಿ ಲಭ್ಯವಿರುವ ಚಿನ್ನ ಮತ್ತು ತಾಮ್ರದ ಅದಿರುಗಳ ಗಣಿಗಾರಿಕೆಯ ಸಾಧ್ಯತೆಗಳನ್ನು ಪುನರ್ಪರಿಶೀಲಿಸುವ ಅಗತ್ಯವನ್ನು ಪ್ರತಿಪಾದಿಸಿದರು.ಇತಿಹಾಸದ ಕಾಲದಲ್ಲಿ ಕೂಡ ಸುರಪುರ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದ್ದು ಸಾಮಾಜಿವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾಗಿತ್ತು. ಪ್ರಾಚೀನ ಹಾಗೂ ಮಧ್ಯಕಾಲೀನ ಸಂದರ್ಭದಲ್ಲಿ ಸುರಪುರ ಅತ್ಯುತ್ತಮ ವಿದ್ಯಾ ಕೇಂದ್ರಗಳಿಂದಾಗಿ ತನ್ನದೇ ಆದ ಮಹತ್ತರ ಕಾಣಿಕೆ ನೀಡಿದೆ ಎಂದು ತಿಳಿಸಿದ ಅವರು, ಸುರಪುರದ ಭವ್ಯ ಇತಿಹಾಸ ಮತ್ತು ಸಂಸ್ಕೃತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಸುರಪುರಲ್ಲಿ ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯನ್ನು ಆರಂಭಿಸಿ ನಾಡಿನ ಎಲ್ಲಾ ಕಾಲೇಜುಗಳಲ್ಲಿರುವ ಇತಿಹಾಸದ ವಿಭಾಗಗಳನ್ನು ಇತಿಹಾಸ ಮತ್ತು ಪುರಾತತ್ವ ವಿಭಾಗಗಳೆಂದು ಮರುನಾಮಕರಣ ಮಾಡಿ ಅದರಂತೆ ಸೂಕ್ತ ಪಠ್ಯಕ್ರಮವನ್ನು ಅಳವಡಿಸಬೇಕೆಂದು ಆಗ್ರಹಿಸಿದರು.ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ನಿರ್ದೇಶಕ ಡಾ.ಆರ್.ಶೇಜೇಶ್ವರ್ ಅಧ್ಯಕ್ಷತೆ ವಹಿಸದ್ದ ಗೋಷ್ಠಿಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಗಣಪತಿ ಸಿನ್ನೂರ್ ಅವರು " ಪ್ರವಾಸೋದ್ಯಮದ ಸಾಧ್ಯತೆ " ಮತ್ತು ಶರಣಬಸಪ್ಪ ಯಾಳವಾರ ಅವರು " ಮಠ ಮಾನ್ಯಗಳು " ಕುರಿತು ಮಾತನಾಡಿದರು.