ವಚನಗಳಿಂದ ಸೌಹಾರ್ದ ಸಾರಿದ ಶರಣರು

KannadaprabhaNewsNetwork | Published : Oct 29, 2024 1:10 AM

ಸಾರಾಂಶ

ದಲಿತ ಹಕ್ಕುಗಳ ಆಂದೋಲನಾ ಸಮ್ಮೇಳನದಲ್ಲಿ ಎಲ್ಲ ವರ್ಗದ ಜಾತಿ ಜನಾಂಗದವರು ಭಾಗಿಯಾಗಿದ್ದಾರೆ.

ಹೂವಿನಹಡಗಲಿ: 12ನೇ ಶತಮಾನದಿಂದ ಈ ನೆಲದ ಶರಣ, ಸಂತರು, ಹರಿದಾಸ ಭಕ್ತರು ತಮ್ಮ ವಚನ ಹಾಗೂ ದಾಸ ಸಾಹಿತ್ಯ, ಕೀರ್ತನೆಗಳ ಮೂಲಕ ಎಲ್ಲ ಸಮಾಜದ ಜನರಲ್ಲಿ, ಸೌಹಾರ್ದ ಸಾರುವ ಕೆಲಸ ಮಾಡಿದ್ದಾರೆಂದುಅಖಿಲ ಭಾರತ ಕಿಸಾನ್‌ ಸಭಾ ರಾಜ್ಯ ಕಾರ್ಯದರ್ಶಿ ಡಾ.ಕೆ.ಎಸ್‌. ಜನಾರ್ದನ ಹೇಳಿದರು.

ಇಲ್ಲಿನ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನಾ ತಾಲೂಕ ಘಟಕವು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪ್ರಥಮ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಈ ದಲಿತ ಹಕ್ಕುಗಳ ಆಂದೋಲನಾ ಸಮ್ಮೇಳನದಲ್ಲಿ ಎಲ್ಲ ವರ್ಗದ ಜಾತಿ ಜನಾಂಗದವರು ಭಾಗಿಯಾಗಿದ್ದಾರೆ, ಇದನ್ನು ನೋಡಿದರೆ ಹಿಂದೆ ಇದ್ದ ಅನುಭವ ಮಂಟಪದ ರೀತಿಯಲ್ಲಿದೆ. ಈ ತಾಲೂಕು ಸಮ್ಮೇಳನ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಸಮಾನತೆಯ ಆಧಾರದ ಮೇಲೆ ಸಮಾಜ ಕಟ್ಟುವ ಆಶಯ ಇನ್ನು ಈಡೇರಿಲ್ಲ, ತಳ ಸಮುದಾಯಗಳ ಶೋಷಣೆ ನಿರಂತರವಾಗಿ ನಡೆಯುತ್ತಿದೆ, ಇಂತಹ ಸಮ್ಮೇಳನಗಳ ಮೂಲಕ ಅದನ್ನು ತೊಲಗಿಸುವ ಕೆಲಸ ಆಗಬೇಕಿದೆ ಎಂದರು.

ಆಂದೋಲನದ ರಾಜ್ಯ ಸಂಚಾಲಕ ಸುರೇಶ ಹಲಗಿ ಮಾತನಾಡಿ, ದೇಶದ

ಮಹಿಳೆಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ, ಕಳ್ಳಸಾಗಣೆಗೆ ಬಲಿಯಾಗುತ್ತಿದ್ದಾರೆ, ದೇಶದಲ್ಲಿ ಪ್ರತಿ ದಿನ ಸುಮಾರು 10ಕ್ಕೂ ಹೆಚ್ಚು ಮಹಿಳೆಯರು ಅತ್ಯಾಚಾರಕ್ಕೆ ಒಳಗಾದ ಘಟನೆಗಳು ನಡೆಯುತ್ತಿವೆ ಎಂದರು.

ಇಂತಹ ಕೃತ್ಯವನ್ನು ಮಟ್ಟಹಾಕಲು ಎಲ್ಲಾ ದಲಿತ ಪರ ಸಂಘಟನೆಗಳು, ಒಂದಾಗಬೇಕು, ಗೌತಮ ಬುದ್ದ, ಬಸವಣ್ಣ ಹಾಗೂ ಅಂಬೇಡ್ಕರ್ ರವರ ತತ್ವಗಳನ್ನು ನಮ್ಮ ಬದುಕಿನಲ್ಲಿ ಜಾರಿಯಾಗಬೇಕಿದೆ. ಸರ್ಕಾರದ ದಲಿತ ಉಪಯೋಜನೆಗಳು ಸರಿಯಾಗಿ ಅನುಷ್ಠಾನಗೊಳಿಸಿ ಅವರ ಹಕ್ಕುಗಳಿಗಾಗಿ ಹೋರಾಟ ಕಟ್ಟಬೇಕಿದೆ ಎಂದರು.

ನಾಗತಿ ಬಸಾಪುರ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ಮಂಜುನಾಥ ಹಾಲಸ್ವಾಮಿ ಸಾನಿಧ್ಯ ವಹಿಸಿದ್ದರು. ಕಿಸಾನ್‌ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ, ಬಿಸಿಯೂಟ ತಯಾರಿಕರ ಫೆಡರೇಷನ್‌ ಜಿಲ್ಲಾಧ್ಯಕ್ಷೆ ಎಚ್‌.ಅನುಸೂಯಮ್ಮ, ಕೆ.ಲಲಿತಮ್ಮ, ಬಿ.ಜಯಲಕ್ಷ್ಮೀ, ಕೆ.ಶ್ರೀಧರ ನಾಯ್ಕ, ಪಿ.ನಿಂಗಪ್ಪ, ಶ್ರೀನಿವಾಸ ಬೋವಿ, ಸಿ.ದ್ಯಾಮಪ್ಪ, ಕೆ.ಸಿ.ಪರಶುರಾಮ, ಎಚ್‌.ದಂಡೆಮ್ಮ ಸೇರಿದಂತೆ ಇತರರಿದ್ದರು.

ಇದಕ್ಕೂ ಮುನ್ನ ಸಮ್ಮೇಳನ ಕುರಿತಾಗಿ ಪ್ರವಾಸಿ ಮಂದಿರದಿಂದ, ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ವರೆಗೂ ಮೆರವಣಿಗೆ ಜಾಥ ಜರುಗಿತು.

Share this article