ಕನ್ನಡಪ್ರಭ ವಾರ್ತೆ ಧಾರವಾಡ
ರೈತರು ತಮ್ಮ ಜಮೀನುಗಳ ಸರ್ವೆ ಮಾಡಿಸಲು ಭೂದಾಖಲೆಗಳ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಅವರಿಗೆ ಅತಿಯಾದ ಕಾರ್ಯಬಾಹುಳ್ಯದಿಂದ ಸರ್ವೇ ತುಂಬಾ ತಡವಾಗುತ್ತಿದೆ. ಇದರಿಂದ ರೈತರಿಗೆ ತುಂಬಾ ತೊಂದರೆ ಆಗಿದೆ. ಸರ್ಕಾರ ಆಧುನಿಕ ಉಪಕರಣಗಳನ್ನು ಪೂರೈಸಿ, ಸಮಸ್ಯೆ ಬಗೆಹರಿಸಿಬೇಕು ಎಂದು ಬೆಳಗಾವಿಯಲ್ಲಿ ಜರುಗಿದ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಸರ್ಕಾರದ ಗಮನ ಸಳೆದಿದ್ದರು.
ಈ ಕುರಿತು ಮಾತನಾಡಿದ ಶಾಸಕ ವಿನಯ ಕುಲಕರ್ಣಿ, ರೈತರು ತಮ್ಮ ಜಮೀನು ಸರ್ವೆ, ಹಿಸ್ಸಾ ಎಂಟ್ರಿ, ಹದ್ದಬಸ್ತು ಮಾಡಿಸುವುದು ಮುಂತಾದವುಗಳಿಗಾಗಿ ಅರ್ಜಿ ಸಲ್ಲಿಸಿ, ವರ್ಷಾನುಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಯಂತ್ರದಿಂದ ಸರ್ವೇ ಮಾಡಲು ಖಾಸಗಿ ಅವರು ವಿಪರೀತ ಹಣ ಪಡೆಯುತ್ತಾರೆ. ಇದರಿಂದ ರೈತರ ಶೋಷಣೆ ಆಗುತ್ತಿದೆ. ಮಧ್ಯವರ್ತಿಗಳ ಹಾವಳಿ, ಖಾಸಗಿಯವರ ಹೆಚ್ಚು ಹಣದ ಬೇಡಿಕೆ ತಪ್ಪಿಸಿ, ಇಲಾಖೆಯಿಂದಲೇ ತ್ವರಿತವಾಗಿ ಸರ್ವೇ ಕಾರ್ಯ ಕೈಗೊಳ್ಳಲು ಈ ಆಧುನಿಕ ಉಪಕರಣ ರೋವರ್ಸ್ ನೀಡಲಾಗಿದೆ ಎಂದ ಅವರು, ಸರ್ವೇ ಮಾಡಿಸಲು ಸಾವಿರಾರು ಅರ್ಜಿಗಳು ಬಾಕಿ ಇವೆ ಎಂದು ರೈತರು ದೂರುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಧಾರವಾಡ ಸೇರಿದಂತೆ ಬೇಡಿಕೆ ಹೆಚ್ಚಿರುವ ತಾಲೂಕುಗಳಲ್ಲಿ ಈ ರೋವರ್ಸ್ ಯಂತ್ರ ಬಳಿಸಿ, ಸರ್ವೇ ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕೆಂದು ಸೂಚಿಸಿದರು.ಕಡಿಮೆ ಸಮಯ
ಜಿಲ್ಲೆಯಲ್ಲಿ ಸುಮಾರು 423 ಗ್ರಾಮಗಳಿದ್ದು, ಲಕ್ಷಾಂತರ ರೈತರ ಜಮೀನುಗಳ ಸರ್ವೇ ನಂಬರಗಳಿವೆ. ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡಲು ಮತ್ತು ಸರ್ವೇ ಕಾರ್ಯ ನಿಖರವಾಗಿ ಮಾಡಲು ರೋವರ್ಸ್ ಸಹಾಯ ಮಾಡುತ್ತದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಅಧಿಕಾರಿಗಳು ಈ ಯಂತ್ರ ಬಳಿಸಿ, ರೈತರಿಗೆ ತಕ್ಷಣ ಸರ್ವೆ ಕಾರ್ಯ ಮುಗಿಸಿ, ನೇರವಾಗುವ ಮೂಲಕ ರಾಜ್ಯದ ರೈತರಿಗೆ ಮಾದರಿ ಆಗಬೇಕು ಎಂದರು.
ಭೂ ದಾಖಲೆಗಳ ಅಧಿಕಾರಿ ರಾಜಶೇಖರ ಹಳ್ಳೂರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್. ಎಫ್. ಸಿದ್ದನಗೌಡರ, ರೈತ ಮುಖಂಡರಾದ ಪ್ರಕಾಶ ಘಾಟಗೆ, ಅರವಿಂದ ಏಗನಗೌಡರ, ಸಂಜೀವ ಲಕ್ಕಮನಹಳ್ಳಿ, ಆರ್.ಸಿ.ದೇಸಾಯಿ, ಭೂಮಾಪಕರಾದ ಮಹಾಂತೇಶ ಬಾಗಿ ಇದ್ದರು.