ಬಳ್ಳಾರಿ: ದೀಪಾವಳಿ ಹಬ್ಬದಲ್ಲೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸೂಚನೆ ನೀಡಿರುವ ಜಿಲ್ಲಾಡಳಿತ ನಡೆ ವಿರುದ್ಧ ನೂರಾರು ಶಿಕ್ಷಕರು ಹಾಗೂ ಸಮೀಕ್ಷೆ ಕರ್ತವ್ಯದಲ್ಲಿರುವ ನೌಕರರು ಇಲ್ಲಿನ ತಾಪಂ ಎದುರು ಭಾನುವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಹಬ್ಬದಲ್ಲಿ ಸಮೀಕ್ಷೆಗೆ ತೆರಳಿದ ಜನರು ಸರಿಯಾಗಿ ಸ್ಪಂದಿಸುವುದಿಲ್ಲ. ಹಬ್ಬದ ದಿನ ಯಾಕೆ ಬಂದ್ರಿ ಎಂದು ಬೈಯುತ್ತಾರೆ. ಹೀಗಾಗಿ ಸಮೀಕ್ಷೆಗೆ ತೆರಳಿದರೂ ಕೆಲಸವಾಗುವುದಿಲ್ಲ. ಹಬ್ಬ ಎಂದು ಗೊತ್ತಿದ್ದರೂ ಜಿಲ್ಲಾಡಳಿತ ಸಮೀಕ್ಷೆಗೆ ತೆರಳುವಂತೆ ಸೂಚನೆ ನೀಡಿದೆ. ನಾವು ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಿಲ್ಲ. ಆದರೆ, ಹಬ್ಬದ ದಿನಗಳಲ್ಲೂ ಸಮೀಕ್ಷೆ ಮಾಡುವಂತೆ ಹೇಳುವುದು ಎಷ್ಟು ಸರಿ? ಎಂದು ಪ್ರತಿಭಟನಾಕಾರರು ಕೇಳಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಪಂ ಸಿಇಒ ಮಹ್ಮದ್ ಹ್ಯಾರೀಸ್ ಸುಮೈರ್, ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರಲ್ಲದೆ, ಸಮೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆ ಅತ್ಯಂತ ಕೆಳಸ್ತರದಲ್ಲಿ ಇರುವುದರಿಂದ ಭಾನುವಾರ ಎನ್ನದೇ ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡರು.ಸಮೀಕ್ಷೆ ಪ್ರಗತಿಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ 30ನೇ ಸ್ಥಾನದಲ್ಲಿದೆ. ಇಂದು ಕೆಲಸ ಮಾಡದೇ ಹೋದರೆ 31ನೇ ಸ್ಥಾನಕ್ಕೆ ಕುಸಿಯಲಿದೆ. ಜಿಲ್ಲಾ ಸಚಿವರು ಸಭೆ ನಡೆಸಿ, ಸಮೀಕ್ಷೆ ಪ್ರಗತಿಯ ಹಿನ್ನಡೆಯ ಬಗ್ಗೆ ಪ್ರಶ್ನಿಸಿದ್ದಾರೆ. ಪರಿಶೀಲನೆ ಮಾಡಿದಾಗ ಬಳ್ಳಾರಿ ನಗರದಲ್ಲಿ ಅತಿ ಕಡಿಮೆ ಪ್ರಗತಿ ಕಂಡು ಬಂದಿದೆ. ಇದಕ್ಕೆ ಮಹಾನಗರ ಪಾಲಿಕೆ ಸರಿಯಾಗಿ ಸ್ಪಂದಿಸದಿರುವುದು ಒಂದು ಕಾರಣವಾಗಿರಬಹುದು. ನಗರದಲ್ಲಿ ಮನೆಗಳ ಹುಡುಕಾಟ ನಡೆಸಿ ಸಮೀಕ್ಷೆ ಮಾಡುವುದು ಕಷ್ಟವಾಗಿದೆ. ಅದು ನನಗೆ ಸಹ ಗೊತ್ತಿದೆ. ನಾನು ಸಹ ಖುದ್ದಾಗಿ ಕೆಲವು ಕುಟುಂಬಗಳನ್ನು ಸಮೀಕ್ಷೆ ಮಾಡಿದ್ದೇನೆ. ನಾನು ಎಸಿ ರೂಂನಲ್ಲಿ ಕುಳಿತು ನಿಮಗೆ ಸೂಚನೆ ನೀಡುತ್ತಿಲ್ಲ. ನಿಮ್ಮಂತೆಯೇ ನಾನು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಸಂಜೆ ಮುಖ್ಯಮಂತ್ರಿ ಸಭೆ ಇದೆ. ಜಿಲ್ಲೆಯ ಪ್ರಗತಿ ಕೇಳುತ್ತಾರೆ. ನೀವೊಂದಿಷ್ಟು ಕೆಲಸ ಮಾಡಿದರೆ ಅನುಕೂಲವಾಗಲಿದೆ ಎಂದು ಸಿಇಒ ಕೇಳಿಕೊಂಡರಲ್ಲದೆ, ನಾನು ನಿಮಗೆ ಆದೇಶ ಮಾಡುತ್ತಿಲ್ಲ. ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಇದೊಂದು ದಿನ ಕೆಲಸ ಮಾಡಿ ಎಂದರು.
ಕೊನೆಗೆ ಶಿಕ್ಷಕರು, ನಿಯೋಜಿತ ಸಿಬ್ಬಂದಿ ಸಮೀಕ್ಷೆಗೆ ತೆರಳಲು ಒಪ್ಪಿಕೊಂಡರು. ಜಿಲ್ಲಾ ಖನಿಜ ನಿಧಿ ಅಧಿಕಾರಿ, ಸಮೀಕ್ಷೆಯ ಬಳ್ಳಾರಿ ತಾಲೂಕು ಉಸ್ತುವಾರಿ ಲೋಕೇಶ್, ಬಿಸಿಎಂ ಇಲಾಖೆಯ ಜಿಲ್ಲಾಧಿಕಾರಿ ಜಲಾಲಪ್ಪ, ಡಿಡಿಪಿಐ ಉಮಾದೇವಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆಸಿಫ್ ಉಪಸ್ಥಿತರಿದ್ದರು.