ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ ಎನ್ನುವುದು ಅಳತೆಗೋಲಾಗಿದ್ದು, ಆ ಮೂಲಕ ಆ ಸಮುದಾಯಗಳ ಏಳ್ಗೆಗೆ ಸರ್ಕಾರ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ತಿಳಿಸಿದರು.ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸಮೀಕ್ಷೆ ನಡೆಸಲು ಕೇಂದ್ರಕ್ಕೆ ಮಾತ್ರ ಅಧಿಕಾರವಿದ್ದು, ರಾಜ್ಯ ಸರ್ಕಾರಕ್ಕಿಲ್ಲ ಎಂಬ ಅಪಸ್ವರಗಳು ಕೇಳಿಬರುತ್ತಿವೆ. ಆದರೆ, ರಾಜ್ಯ ಸರ್ಕಾರವೂ ಸಮೀಕ್ಷೆ ನಡೆಸಬಹುದೆಂದು ಸುಪ್ರೀಂಕೋರ್ಟ್ ಹೇಳಿದೆ. ೨೦೧೩ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆಗೆ ಆದೇಶಿಸಿದ್ದರು. ಆಗ ನಾನು ಆಯೋಗದ ಅಧ್ಯಕ್ಷನಾಗಿ ವೈಜ್ಞಾನಿಕ, ವಸ್ತುನಿಷ್ಠ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದೆ. ಆ ವರದಿ ಜಾರಿಗೆ ಪ್ರಬಲ ಜಾತಿಗಳು ವಿರೋಧಿಸಿದ್ದರು. ಈಗ ಮತ್ತೆ ಜನಗಣತಿಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ, ಯಾವುದೇ ಆಯೋಗ ವರದಿ ಸಲ್ಲಿಸಿದರೆ ಅದನ್ನು ಜಾರಿಗೊಳಿಸಿ ಕಾರ್ಯರೂಪಕ್ಕೆ ತರಬೇಕಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಸ್ಸಿ, ಎಸ್ಟಿ, ಇತರೆ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ, 1993ರಲ್ಲಿ ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ಅವರು ಇತರೆ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಜಾರಿಗೊಳಿಸಿದ್ದರು. ಮಂಡಲ್ ಆಯೋಗದ ವರದಿ ಪ್ರಕಾರ ಇತರೆ ಹಿಂದುಳಿದ ಜಾತಿಗಳಿಗೆ ಶೇ.57 ರಷ್ಟು ಮೀಸಲಾತಿ ಇದ್ದರೂ, ಕೇವಲ ಶೇ.27ರಷ್ಟು ಸಹ ಸರಿಯಾಗಿ ಜಾರಿಯಾಗಿಲ್ಲ. ಸರ್ಕಾರಗಳು ನಿರುದ್ಯೋಗಿ ವಿದ್ಯಾವಂತರಿಗೆ ನೌಕರಿ ಕೊಡುವ ಬದಲು ಗುತ್ತಿಗೆ ಆಧಾರದಲ್ಲೇ ಕೆಲಸ ನೀಡುತ್ತಿರುವುದಕ್ಕೆ ಮುಂದಾಗಿರುವುದು ಮೀಸಲಾತಿ ಇದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂದು ತಿಳಿಸಿದರು.
ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಪ್ರಾಸ್ತಾವಿಕ ನುಡಿದರು. ತಿಂಥಿಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ಧರಾಮಾನಂದ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಡಾ. ಬಸವ ಮಾಚೀದೇವ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ, ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ನರಸೀಪುರ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಮಂಗಲ್‌ನಾಥ ಜೀ ಮಹರಾಜ್, ಪಟ್ಟಸಾಲಿ ಪೀಠದ ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ನೀಲಕಂಠಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿಂದುಳಿದ ಜಾತಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಗೊಲ್ಲರ ಸಣ್ಣ ಕೆಂಚಪ್ಪ ಅಧ್ಯಕ್ಷತೆ ವಹಿಸಿದ್ದರು.