ಐನೆಕಿದು ಮನೆಗೆ ಶಂಕಿತ ನಕ್ಸಲರ ಭೇಟಿ: ಕೂಂಬಿಂಗ್‌ ಚುರುಕು

KannadaprabhaNewsNetwork |  
Published : Mar 25, 2024, 12:48 AM IST
ಸುಬ್ರಹ್ಮಣ್ಯದ ಐನೆಕಿದುವಿನ ಮನೆಗೆ ಶಂಕಿತರ ಭೇಟಿ ಪ್ರಕರಣಪೋಲಿಸ್ ಅಧಿಕಾರಿಗಳು, ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ಭೇಟಿ | Kannada Prabha

ಸಾರಾಂಶ

ಕೂಜುಮಲೆ, ಕಡಮಕಲ್ಲು, ಐನೆಕಿದು ಸೇರಿದಂತೆ ದ.ಕ. ಮತ್ತು ಹಾಸನ ಭಾಗಗಳ ಕುಲ್ಕುಂದ, ನಡುತೋಟ, ಭಾಗ್ಯ, ಎರ್ಮಾಯಿಲ್, ಬಿಸಿಲೆ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕು ಗೊಂಡಿದೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ/ಸುಳ್ಯ

ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶನಿವಾರ ಸಂಜೆ ವೇಳೆ ನಾಲ್ವರು ಶಂಕಿತ ನಕ್ಸಲರು ಭೇಟಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದವರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದರೊಂದಿಗೆ ನಕ್ಸಲರು ಈ ಪ್ರದೇಶ ತೊರೆದು ಹೋಗಿಲ್ಲ ಎನ್ನುವುದು ದೃಢಪಟ್ಟಿದೆ.

ಶನಿವಾರ ಸಂಜೆ ೬.೩೦ರ ಸುಮಾರಿಗೆ ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದಮೂಲೆ ಮನೆಯೊಂದಕ್ಕೆ ಇಬ್ಬರು ಹೆಂಗಸರು, ಇಬ್ಬರು ಪುರುಷರು ಇರುವ ನಾಲ್ವರು ಶಂಕಿತರು ಆಗಮಿಸಿದ್ದರು. ಮನೆಯಲ್ಲಿ ಸುಮಾರು ೩೦- ೪೫ ನಿಮಿಷಗಳ ಕಾಲ ಇದ್ದ ತಂಡದ ಸದಸ್ಯರು ಮನೆಯಿಂದ ಊಟ, ಅಕ್ಕಿ, ಸಕ್ಕರೆ ಪಡೆದು ಬಂದ ದಾರಿಯತ್ತ ತೆರಳಿದ್ದರು.

ಕೂಜಿಮಲೆಗೆ ನಕ್ಸಲರು ಬಂದಿರುವ ವಿಚಾರ ಪತ್ರಿಕೆಗಳಲ್ಲಿ ಬಂದಿದೆ ಎಂದು ಮನೆಯವರು ಹೇಳಿದಾಗ ಆ ಪತ್ರಿಕೆ ಇದ್ದರೆ ಕೊಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಭಾನುವಾರ ಬೆಳಗ್ಗೆ ನಕ್ಸಲ್ ನಿಗ್ರಹ ದಳದ ಡಿವೈಎಸ್‌ಪಿ ರಾಘವೇಂದ್ರ, ಪುತ್ತೂರು ಉಪವಿಭಾಗ ಡಿವೈಎಸ್‌ಪಿ ಅರುಣ್‌ ನಾಗೇಗೌಡ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಕಾರ್ತಿಕ್ ಸೇರಿದಂತೆ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು, ಸಿಬ್ಬಂದಿ, ಗುಪ್ತದಳದ ಅಧಿಕಾರಿಗಳು ಭೇಟಿ ನೀಡಿ ಮನೆಯವರಿಂದ ಮಾಹಿತಿ ಪಡೆದರು.

ಶನಿವಾರ ಸಂಜೆ ವೇಳೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಅರಣ್ಯ ಪ್ರದೇಶದಿಂದ ಕಾಡಂಚಿನ ಮನೆಯ ಬಳಿಗೆ ಶಂಕಿತರು ಆಗಮಿಸಿದ್ದು, ಅವರು ನಡೆದುಕೊಂಡು ಬರುವಾಗ ದಾರಿಯಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿದು, ಆತನ ಬಳಿ ಅವರು ಮಾತನಾಡಿ, ಅಲ್ಲಿಂದ ರಸ್ತೆಯ ಬದಿಯ ಮನೆಯೊಂದಕ್ಕೆ ತೆರಳುವವರಿದ್ದರು, ಆದರೆ ಆ ಮನೆಯ ಜಾಗಕ್ಕೆ ಸೋಲಾರ್ ಬೇಲಿ ಅಳವಡಿಸಲಾಗಿದ್ದರಿಂದ ಮತ್ತೊಂದು ಮನೆಗೆ ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.

ನಾವು ಯಾರೆಂದು ಗೊತ್ತಾ:

ತೋಟದಮೂಲೆ ಮನೆಗೆ ಬಂದ ಸಾದಾ ಬಟ್ಟೆ ಧರಿಸಿದ್ದ ಶಂಕಿತರು ತಲೆಗೆ ಬಟ್ಟೆ ಕಟ್ಟಿಕೊಂಡಿದ್ದು, ತಾವು ಯಾರೆಂದು ನಿಮಗೆ ತಿಳಿದಿದೆಯಾ ಎಂದು ಮನೆಯವರಲ್ಲಿ ಕೇಳಿದ್ದಾರೆ. ಕಳೆದ ವಾರ ನಮ್ಮ ತಂಡದ ಸದಸ್ಯರೇ ಕೂಜಿಮಲೆ ಎಸ್ಟೇಟ್ ಅಂಗಡಿಗೆ ಹೋಗಿದ್ದು ಎಂದು ತಿಳಿಸಿದ್ದಾರೆ. ಬಳಿಕ ಕೆಲ ವಿಚಾರಗಳ ಬಗ್ಗೆ ಮನೆಯವರಲ್ಲಿ ಮಾತುಕತೆ ನಡೆಸಿದ್ದಾರೆ. ಮನೆಯ ಹೊರಗಿದ್ದ ಕೆಲಸದವರಲ್ಲೂ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ನಾವು ಬರುವ ವೇಳೆ ನಮ್ಮನ್ನು ವ್ಯಕ್ತಿಯೊಬ್ಬರು ನೋಡಿದ್ದು, ಅವರು ಹೊರಗೆ ಮಾಹಿತಿ ನೀಡಬಹುದು, ನಾವು ಇಲ್ಲಿ ತುಂಬ ಹೊತ್ತು ಇರುವುದು ಸರಿಯಲ್ಲ ಎಂದು ಅಲ್ಲಿಂದ ಅರಣ್ಯದತ್ತ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಶಂಕಿತರು ತಮ್ಮ ಜೊತೆಗೆ ತಂದಿದ್ದ ಗನ್‌ನ್ನು ಗೋಡೆಗೆ ಒರಗಿಸಿಟ್ಟಿದ್ದರು ಎನ್ನಲಾಗಿದೆ.ಕೂಂಬಿಂಗ್ ಚುರುಕು: ಕೂಜುಮಲೆ, ಕಡಮಕಲ್ಲು, ಐನೆಕಿದು ಸೇರಿದಂತೆ ದ.ಕ. ಮತ್ತು ಹಾಸನ ಭಾಗಗಳ ಕುಲ್ಕುಂದ, ನಡುತೋಟ, ಭಾಗ್ಯ, ಎರ್ಮಾಯಿಲ್, ಬಿಸಿಲೆ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕು ಗೊಂಡಿದೆ. ಎಎನ್‌ಎಫ್ ತಂಡದಿಂದ ಪುಷ್ಪಗಿರಿ ಅರಣ್ಯ ಭಾಗಗಳಲ್ಲಿ ಭಾನುವಾರ ಮುಂಜಾನೆಯಿಂದ ವಿವಿಧ ತಂಡದ ೭೦ಕ್ಕೂ ಅಧಿಕ ಸಿಬ್ಬಂದಿಗಳಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಾರದೊಳಗೆ ಎರಡು ಸಲ ಪ್ರತ್ಯಕ್ಷ! ಮಾ. 16 ರಂದು ದ.ಕ.-ಕೊಡಗು ಜಿಲ್ಲೆಗಳ ಗಡಿ ಪ್ರದೇಶ ಕೂಜಿಮಲೆಗೆ ನಾಲ್ವರು ನಕ್ಸಲರು ಬಂದಿರುವುದು ಖಚಿತಪಟ್ಟಿದ್ದು, ಈ ಹಿನ್ನಲೆಯಲ್ಲಿ ವಿವಿಧ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಶನಿವಾರ ಘಟನೆ ನಡೆದ ಪ್ರದೇಶ ಕಾಡಿನ ಮೂಲಕ ಕೂಜಿಮಲೆಯಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಕೂಜಿಮಲೆಗೆ ಬಂದ ತಂಡವೇ ಇಲ್ಲಿಗೂ ಬಂದಿದೆ ಎಂಬುದು ಬಹುತೇಕವಾಗಿ ದೃಢಪಟ್ಟಿದೆ. ಕೂಜಿಮಲೆಗೆ ಬಂದ ತಂಡದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಇದ್ದಾನೆ ಎನ್ನುವುದನ್ನು ಪೊಲೀಸರು ಮತ್ತು ಎಎನ್‌ಎಫ್ ನವರು ಬಲವಾಗಿ ಸಂಶಯಿಸಿದ್ದಾರೆ. ಶನಿವಾರ ಬಂದ ತಂಡದಲ್ಲಿದ್ದವರೊಬ್ಬ ಕೂಡಾ ವಿಕ್ರಂ ಗೌಡನಂತೆ ಹೋಲುತ್ತಿರುವುದಾಗಿ ಇಲಾಖೆಯವರಿಗೆ ಮಾಹಿತಿ ಲಭಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು