ಕನಕಗಿರಿ: ಅಪರಿಚಿತ ವಿವಾಹಿತ ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ಸುಟ್ಟು ಹಾಕಲಾದ ಹೃದಯವಿದ್ರಾಹಕ ಘಟನೆ ಪಟ್ಟಣದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಮಾಹಿತಿ ತಿಳಿದು ಎಸ್ಪಿ ರಾಮ್ ಅರಸಿದ್ದಿ ಹಾಗೂ ಡಿವೈಎಸ್‌ಪಿ ಜೆ.ಎಸ್ ನ್ಯಾಮಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ. ಘಟನೆ ನಡೆದ ಮನೆಯ ಸುತ್ತಮುತ್ತಲೂ ಇರುವ ಮಹಿಳೆಯರನ್ನು ವಿಚಾರಣೆ ನಡೆಸಲಾಗಿದ್ದು, ಬೆಳಗಿನ ಜಾವ ಶ್ವಾನದಳದಿಂದಲೂ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗಿದೆ.
ಬೆಚ್ಚಿ ಬಿದ್ದ ಜನತೆ: ಮೃತ ಮಹಿಳೆ ಗೌಂಡಿ ಕೆಲಸ ಮಾಡುತ್ತಿರಬಹುದೆಂದು ಶಂಕಿಸಲಾಗಿದ್ದು, ಸೋಮವಾರ ವಾರದ ಸಂತೆ ಮಾಡಿಕೊಂಡು ಬಂದಿರಬಹುದು ಎನ್ನಲಾಗಿದೆ. ಆರೋಪಿಗಳು ಪುಸಲಾಯಿಸಿ ಪಟ್ಟಣದ ಮಧ್ಯ ಇರುವ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆಗೈದಿದ್ದಲ್ಲದೇ ಸಾಕ್ಷ್ಯ ಮುಚ್ಚಿ ಹಾಕುವುದಕ್ಕಾಗಿ ಶವ ಸುಟ್ಟು ಹಾಕಲೆತ್ನಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ದುರ್ಘಟನೆಯಿಂದಾಗಿ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕ ಸಂಗನಗೌಡ ದೂರು ನೀಡಿದ್ದು, ಅಕ್ಕಪಕ್ಕದ ಮನೆಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಓಡಾಟ ಸೆರೆಯಾಗಿದೆ ಎಂದು ತಿಳಿದು ಬಂದಿದೆ. ಕೆಲ ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.