ಯುಪಿ ಮೂಲದ ಶಂಕಿತ ಉಗ್ರ ಸೊಹೇಲ್‌ ಬನ್ನಿಕೋಡಲ್ಲಿ ಬಲೆಗೆ!

KannadaprabhaNewsNetwork |  
Published : Jun 24, 2026, 01:30 AM IST
-23ಕೆಡಿವಿಜಿ3:  | Kannada Prabha

ಸಾರಾಂಶ

ಪೇಂಟಿಂಗ್ ಕೆಲಸ ಮಾಡುವ ನೆಪದಲ್ಲಿ ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ ಕಳೆದ 20-25 ದಿನಗಳಿಂದ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನನ್ನು ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ನೇತೃತ್ವದಲ್ಲಿ ಮಂಗಳವಾರ ಬೆಳಗಿನ ಜಾವ ವಶಕ್ಕೆ ಪಡೆಯಲಾಗಿದೆ.

- ಪಾಕ್‌ಗೆ ಕರೆ, ಅಲ್ಲಿನ ಬ್ರೈನ್ ವಾಶ್‌ ವಾಟ್ಸಪ್ ಗ್ರೂಪಲ್ಲೂ ಸಕ್ರಿಯ । ಪೇಂಟಿಂಗ್ ಕೆಲಸಗಾರನೆಂದು ಹರಿಹರ ತಾಲೂಕಲ್ಲಿದ್ದ ಆರೋಪಿ

- - - - ಕೇಂದ್ರ ಗುಪ್ತಚರ ಇಲಾಖೆ, ದಾವಣಗೆರೆ ಜಿಲ್ಲಾ ಪೊಲೀಸರ ನಸುಕಿನ ಕಾರ್ಯಾಚರಣೆ - ಬಂಧಿತ ಶಂಕಿತ ಉಗ್ರ ತುಮಕೂರು ಪೊಲೀಸರ ವಶಕ್ಕೆ, ಮುಂದೆ ಎನ್ಐಎನ ತನಿಖೆ

- ತುಮಕೂರು ಅಲ್ಲಾಭಕ್ಷಿ, ದಾವಣಗೆರೆ ಜಮೀರ್ ಬೆನ್ನಲ್ಲೇ, ಈಗ ಯುಪಿ ಸೊಹೇಲ್‌ ವಶ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಪೇಂಟಿಂಗ್ ಕೆಲಸ ಮಾಡುವ ನೆಪದಲ್ಲಿ ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ ಕಳೆದ 20-25 ದಿನಗಳಿಂದ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನನ್ನು ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ನೇತೃತ್ವದಲ್ಲಿ ಮಂಗಳವಾರ ಬೆಳಗಿನ ಜಾವ ವಶಕ್ಕೆ ಪಡೆಯಲಾಗಿದೆ.

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆ ಗಂಗೋಹ್‌ ತಾ. ಲಖ್ನೋತಿ ಗ್ರಾಮ ಮೂಲದ ಸೊಹೇಲ್‌ ತಂದೆ ಲಿಯಾಖತ್ (22) ಬಂಧಿತ ಶಂಕಿತ ಉಗ್ರ. ಸಹರಾನಪುರವು ಮರದ ಕೆತ್ತನೆ ಕರಕುಶಲ ವಸ್ತುಗಳಿಗೆ ಪ್ರಸಿದ್ಧಿ ಪಡೆದಿದೆ. ಅಲ್ಲಿಂದ ಪೇಂಟಿಂಗ್ ಕೆಲಸ ಮಾಡುವ ನೆಪದಲ್ಲಿ ಬಂದು ದಾವಣಗೆರೆ ಜಿಲ್ಲೆ ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ 20-25 ದಿನಗಳಿಂದ ಬಂಧಿತ ಸೊಹೇಲ್ ವಾಸವಾಗಿದ್ದ ಎನ್ನಲಾಗಿದೆ.

ಬೆಳ್ಳೂಡಿಯ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಉತ್ತರ ಪ್ರದೇಶದ ಏಳೆಂಟು ಕೆಲಸಗಾರರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ರೆಡ್ ಆಕ್ಸೈಡ್‌ ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರ ಪೈಕಿ ಓರ್ವನ ಸಹೋದರನೇ ಸೊಹೇಲ್. ಉತ್ತರ ಪ್ರದೇಶದಿಂದ ತನ್ನ ಸಹೋದರ ಕೆಲಸ ಮಾಡುತ್ತಿದ್ದ ಬನ್ನಿಕೋಡು ಗ್ರಾಮಕ್ಕೆ ಬಂದು, ಇಲ್ಲೇ ವಾಸವಿದ್ದ. ಬನ್ನಿಕೋಡು ಗ್ರಾಮದ ಹೊರವಲಯದಲ್ಲಿ ಕಾರ್ಗಿಲ್‌ಗೆ ಹೋಗುವ ರಸ್ತೆಯ ಕೊನೆಯ ಎರಡು ಮನೆಗಳಲ್ಲಿ ಉತ್ತರ ಪ್ರದೇಶದ ಪೇಂಟಿಂಗ್ ಕೆಲಸಗಾರರು ಇದ್ದರು. ಯು.ಪಿ.ಯಿಂದ ಬಂದು, ಇಲ್ಲಿ ಏನೂ ಅರಿಯದವನಂತಿದ್ದ ಸೊಹೇಲ್‌ನ ಜನ್ಮ ಜಾಲಾಡಿದ್ದ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ದಾಳ ಮಾಡಿ, ಬಂಧಿಸಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಪಾಕಿಸ್ತಾನ ಉಗ್ರರ ಜೊತೆಗೆ ನಿರಂತರ ಸಂಪರ್ಕ, ಪಾಕ್‌ ಮೂಲದ ಭಾರತ ವಿರೋಧಿ ವಾಟ್ಸಪ್ ಗ್ರೂಪ್ ಆದ ರಾಣಾದಲ್ಲಿ ಬಂಧಿತ ಸೊಹೇಲ್ ಸಕ್ರಿಯನಾಗಿದ್ದ. ಈಗ್ಗೆ ಒಂದು ತಿಂಗಳ ಹಿಂದಷ್ಟೇ ತುಮಕೂರು ಮೂಲಕ ಅಲ್ಲಾಭಕ್ಷಿ ಹಾಗೂ ದಾವಣಗೆರೆಯ ಜಮೀರ್ ಖಾನ್ ಎಂಬ ಶಂಕಿತ ಉಗ್ರರನ್ನು ತುಮಕೂರು ಪೊಲೀಸರು ಬಂಧಿಸಿದ್ದರು. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಬನ್ನಿಕೋಡು ಗ್ರಾಮದಲ್ಲಿ ಈಗ ಮತ್ತೊಬ್ಬನನ್ನು ಪೊಲೀಸರು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಪಾಕಿಸ್ತಾನ ಮೂಲಕ ಭಾರತ ವಿರೋಧಿಯಾದ, ಉಗ್ರದ ವಾಟ್ಸಪ್ ಗ್ರೂಪ್ ಆದ ರಾಣಾ ಗ್ರೂಪ್‌ನಲ್ಲಿ ಉತ್ತರ ಪ್ರದೇಶ ಮೂಲಕ ಬಂಧಿತ ಸೊಹೇಲ್ ಸಕ್ರಿಯನಾಗಿದ್ದ. ಅಲ್ಲದೇ, ತನ್ನ ಮೊಬೈಲ್‌ನಿಂದ ಅಂತಾರಾಷ್ಟ್ರೀಯ ಕರೆಗಳನ್ನೂ ಆತ ಮಾಡಿದ್ದು, ಪಾಕಿಸ್ತಾನದ ಉಗ್ರರು, ಉಗ್ರ ಸಂಘಟನೆಗಳವರ ಜೊತೆಗೆ ಆತ ಸಂಪರ್ಕ ಹೊಂದಿದ್ದುದಕ್ಕೆ ಸಾಕಷ್ಟು ಮಾಹಿತಿ ಕಲೆ ಹಾಕಿದ ಕೇಂದ್ರ ಗುಪ್ತಚರ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆಗಳು ಮಂಗಳವಾರ ನಸುಕಿನ ವೇಳೆ ಜಂಟಿ ಕಾರ್ಯಾಚರಣೆ ನಡೆಸಿ, ಸೊಹೇಲ್‌ನನ್ನು ಬಂಧಿಸುವಲ್ಲಿ ಸಫಲವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಮೂಲದ ಶಂಕಿತ ಉಗ್ರರ ಜೊತೆ ಬಂಧಿತ ಸೊಹೇಲ್‌ ಸಂಪರ್ಕ ಹೊಂದಿರುವ ಶಂಕೆ ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ನೇತೃತ್ವದ ಅಧಿಕಾರಿ, ಸಿಬ್ಬಂದಿ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಹಕಾರದಲ್ಲಿ ಮಂಗಳವಾರ ಬೆಳಗಿನ ಜಾವ ಬನ್ನಿಕೋಡು ಗ್ರಾಮದಲ್ಲಿ ಸೊಹೇಲ್ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ಮಾಡಿ, ಎಲ್ಲಾ 8 ಜನರನ್ನು ವಶಕ್ಕೆ ಪಡೆದರು. ಉಳಿದವರನ್ನು ಬಿಟ್ಟು, ಸೊಹೇಲ್‌ನನ್ನು ಬಂಧಿಸಿ, ತುಮಕೂರು ಪೊಲೀಸರ ವಶಕ್ಕೆ ನೀಡಲಾಗಿದೆ.

ತುಮಕೂರು ಪೊಲೀಸರಿಂದ ಬಂಧಿತ ಸೊಹೇಲ್‌ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆ ಮೂಲಕ ಬಂಧಿತ ಶಂಕಿತ ಉಗ್ರ ಸೊಹೇಲ್‌ ಪೇಂಟಿಂಗ್‌ ಕೆಲಸಗಾರನೆಂದು ಇಲ್ಲಿ ವಾಸ್ತವ್ಯ ಮಾಡಿದ್ದ. ಆತ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದ್ದು, ವಿಶೇಷವಾಗಿ ಪಾಕಿಸ್ತಾನಕ್ಕೆ ಆತ ಕರೆ ಮಾಡಿದ್ದು, ಆತನಿಗೆ ಕರೆ ಬಂದಿರುವುದು, ದೇಶವಿರೋಧಿ ಚಟುವಟಿಕೆಗಳಲ್ಲಿ ಬಂಧಿತ ಸೊಹೇಲ್ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ, ಪಾಕಿಸ್ತಾನ ಮೂಲಕ ರಾಣಾ ಹೆಸರಿನ ವಾಟ್ಸಪ್ ಗ್ರೂಪ್ ಬ್ರೈನ್ ವಾಶ್ ಮಾಡುವಂತಹ ಗ್ರೂಪ್ ಆಗಿದ್ದು, ಅದರಲ್ಲಿ ಆತ ಸಕ್ರಿಯನಾಗಿದ್ದುದು ಸಹ ಆತನ ಮೇಲೆ ಸಾಕಷ್ಟು ಅನುಮಾನ ಹೆಚ್ಚಲು ಕಾರಣವಾಗಿದೆ ಎಂದು ಹೇಳಲಾಗಿದೆ.

- - -

-23ಕೆಡಿವಿಜಿ2: ದಾವಣಗೆರೆ ಜಿಲ್ಲೆ ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ ಬಂಧಿತನಾದ ಉತ್ತರ ಪ್ರದೇಶ ಮೂಲಕ ಶಂಕಿತ ಉಗ್ರ ಸೊಹೇಲ್‌.

-23ಕೆಡಿವಿಜಿ3: ಉತ್ತರ ಪ್ರದೇಶ ಮೂಲದ ಪೇಂಟಿಂಗ್ ಕೆಲಸಗಾರರು ವಾಸವಾಗಿದ್ದರು ಎನ್ನಲಾದ ಮನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾವು ತಿನ್ನಲು ಅಡ್ಡಿಯಾದ ಕಾರು ಜಖಂ ಮಾಡಿದ ಕಾಡಾನೆ
ಪಿಯು ಉಪನ್ಯಾಸಕರು ಪ್ರೌಢಶಾಲೆಗೆ ಬೋಧಿಸಲು ತಿದ್ದುಪಡಿ ವಿರೋಧಿಸಿ ಉಪನ್ಯಾಸಕರ ಪ್ರತಿಭಟನೆ