ದುಗ್ಗಳ ಸದಾನಂದ
ಹೋದವಾಡ ಗ್ರಾಮದ ಕೇಮಾಟ್ ಕಾಳಪ್ಪ ಮಾಡು ಎಂಬಲ್ಲಿ ಯೂಸುಫ್ ಹಾಜಿ ಎಂಬವರು ಪಶು ಸಂಗೋಪನೆ ಮಾಡುತ್ತಿದ್ದು ಮೇಯಲು ಬಿಟ್ಟ ಹಸು ಒಂದು ತೀವ್ರ ಗಾಯಗಳೊಂದಿಗೆ ಸೋಮವಾರ ಹಿಂದಿರುಗಿತ್ತು. ಹಸುವಿನ ದೇಹದಲ್ಲಿ ಮೂರು ನಾಲ್ಕು ಕಡೆಗಳಲ್ಲಿ ಹುಲಿ ಪಂಜಗಳಿಂದ ತೀವ್ರ ಗಾಯ ಮಾಡಿರುವ ಗುರುತು ಕಂಡುಬಂದಿದ್ದು ಹಾಲು ಕರೆಯುವ ಹಸು ತೀವ್ರ ಅಸ್ವಸ್ಥಗೊಂಡಿದೆ.
ಇದರೊಂದಿಗೆ ಕಳೆದ ಒಂದು ವಾರದಲ್ಲಿ ಈ ಭಾಗದಲ್ಲಿ ನಾಲ್ಕು ಹಸುಗಳು ನಾಪತ್ತೆಯಾಗಿದ್ದು, ಹುಡುಕಲು ತೆರಳಿದ ಯೂಸುಫ್ ಅವರಿಗೆ ಪ್ರಾಣಿಯ ಹೆಜ್ಜೆ ಗುರುತು ಕಾವೇರಿ ನದಿ ದಡದಲ್ಲಿ ಕಂಡಿದ್ದು ಹುಲಿಯ ಪಾದದ ಚಿಹ್ನೆ ಹೋಲುತ್ತಿದೆ. ಇದರೊಂದಿಗೆ ಅಲ್ಲಿ ಒಂದು ಹಸುವಿನ ಕಳೇಬರ ಕೂಡಾ ಕಂಡುಬಂದಿದೆ ಎಂದು ಯೂಸುಫ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಮಂಗಳವಾರ ಬಂದು ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿದ್ದಲ್ಲದೆ ಪಶು ಇಲಾಖೆ ಸಿಬ್ಬಂದಿ ಹಸುವಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಜಾನುವಾರುಗಳನ್ನು ಮೇಯಲು ಬಿಟ್ಟಾಗ ಹುಲಿ ಅಥವಾ ಚಿರತೆ ಜಾನುವಾರಗಳ ಮೇಲೆ ದಾಳಿ ನಡೆಸಿ ತಿನ್ನುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
---ಅರಣ್ಯ ಇಲಾಖೆಯವರು ಕಾಟಚಾರಕ್ಕೆ ಎಂಬಂತೆ ಪರಿಶೀಲನೆ ಮಾಡಿ ತೆರಳಿದ್ದಾರೆ. ನಮ್ಮ ಮನೆ ರಸ್ತೆಯ ಆರಂಭದಲ್ಲಿಯೇ ಇದೆ. ಇಲ್ಲೇ ಸಮೀಪದಲ್ಲಿ ಹುಲಿ ಜಾನುವಾರುಗಳನ್ನು ತಿಂದಿರುವುದರಿಂದಾಗಿ ಮನೆಯಿಂದ ಹೊರಬರಲು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆ ಹಾಗು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
-ಕಿರಣ್ ಕುಮಾರ್ ಗ್ರಾಮಸ್ಥ.