ಪ್ರಗತಿಯಲ್ಲಿ ಹಿಂದುಳಿದ ಅಧಿಕಾರಿಗಳ ಅಮಾನತು

KannadaprabhaNewsNetwork |  
Published : May 15, 2025, 01:40 AM IST
ಜಿಲ್ಲಾಧಿಕಾರಿಗಳ ಸಭೆ | Kannada Prabha

ಸಾರಾಂಶ

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಅನುಷ್ಠಾನ ಮಾಡುವಲ್ಲಿ ಪ್ರಗತಿಯಲ್ಲಿ ಹಿಂದುಳಿದ ಅಧಿಕಾರಿಗಳ ಅಮಾನತ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಅನುಷ್ಠಾನ ಮಾಡುವಲ್ಲಿ ಪ್ರಗತಿಯಲ್ಲಿ ಹಿಂದುಳಿದ ಅಧಿಕಾರಿಗಳ ಅಮಾನತ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಗರೋತ್ಥಾನ ಯೋಜನೆಯು ಪ್ರಾರಂಭವಾಗಿ 3 ವರ್ಷಗಳು ಕಳೆದರೂ ಕುಣಿಗಲ್ ಪುರಸಭೆಯಲ್ಲಿ ಕೇವಲ ಶೇ.14ರಷ್ಟು ಮಾತ್ರ ಭೌತಿಕ ಸಾಧನೆಯಾಗಿದೆ. ಕಾರಣವೇನೆಂದು ಪುರಸಭೆ ಮುಖ್ಯಾಧಿಕಾರಿ ಮಂಜುಳಾ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಅನುಮೋದನೆ ನೀಡಿದ 27 ಕಾಮಗಾರಿಗಳ ಪೈಕಿ ಕೇವಲ 4 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದ್ದು, 6 ಕಾಮಗಾರಿಗಳು ಇನ್ನೂ ಟೆಂಡರು ಪ್ರಕ್ರಿಯೆ ಹಂತದಲ್ಲಿವೆ. ಇದೇ ರೀತಿ ಕಾಮಗಾರಿ ಪ್ರಗತಿಯಲ್ಲಿ ಹಿನ್ನಡೆ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಮನೆಗೆ ಕಳುಹಿಸಲು ಕ್ರಮವಹಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದರು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಕುಡಿಯುವ ನೀರು, ಸ್ವಚ್ಛತಾ ಕಾಮಗಾರಿಗಳಿಗಾಗಿ ಜಿಲ್ಲೆಗೆ ಈವರೆಗೂ ಒಟ್ಟು 44.71 ಕೋಟಿ ರು. ಬಿಡುಗಡೆಯಾಗಿದೆ. ಈಗಾಗಲೇ ಈ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಬೇಕಾಗಿತ್ತು. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಿರೀಕ್ಷಿತ ಮಟ್ಟಕ್ಕೆ ಯೋಜನೆ ಪ್ರಗತಿಯಾಗಿಲ್ಲವೆಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ವಿಳಂಬಕ್ಕೆ ಸಚಿವರು ಕಾರಣ ಕೇಳಿದಾಗ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಯೋಗಾನಂದ ಅವರು ಗುತ್ತಿಗೆದಾರರಿಂದ ಟೆಂಡರು ಅರ್ಜಿಗಳು ಸಲ್ಲಿಕೆಯಾಗದಿರುವುದರಿಂದ ಕಾಮಗಾರಿ ಕೈಗೊಳ್ಳಲು ತಡವಾಗಿದೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸಿವಿಲ್ ಕಾಮಗಾರಿಗಳಿಗೆ ನಾಮುಂದು-ತಾಮುಂದು ಎಂದು ಟೆಂಡರ್ ಸಲ್ಲಿಸಲು ಗುತ್ತಿಗೆದಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಸಭೆಗೆ ತಪ್ಪು ಮಾಹಿತಿ ನೀಡಿದರೆ ನಾನು ಸಹಿಸುವುದಿಲ್ಲ. ವಿಳಂಬಕ್ಕೆ ಯಾವುದೇ ನೆಪ ಹೇಳದೆ ಆಗಸ್ಟ್ ಮಾಹೆಯೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ಸೂಚನೆ ನೀಡಿದರು.ಮುಂದಿನ ಮಾರ್ಚ್-2026ಕ್ಕೆ ಯೋಜನೆಯನ್ನು ಪೂರ್ಣಗೊಳಿಸಬೇಕಾಗಿರುವುದರಿಂದ ಜನವರಿ-2026ರೊಳಗೆ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಿಗದಿತ ಅವಧಿಯೊಳಗೆ ಟೆಂಡರು ಪ್ರಕ್ರಿಯೆಯನ್ನೂ ಮುಗಿಸಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಎಲ್ಲಾ ವಾರ್ಡುಗಳಿಗೆ ಪ್ರತೀ ದಿನ ನೀರು ಸರಬರಾಜು ಮಾಡಲು ಎಲ್ಲಾ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾವಗಡ ಪುರಸಭೆಯ 2 ವಾರ್ಡುಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತೀ ದಿನ ಬೆಳಿಗ್ಗೆ ಹಾಗೂ ಸಂಜೆ ಕ್ಷೇತ್ರಗಳಿಗೆ ಭೇಟಿ ನೀಡಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಸಚಿವರು ಮುಂದುವರೆದು ಮಾತನಾಡಿ, ನಗರ ಪ್ರದೇಶ ವ್ಯಾಪ್ತಿಯಲ್ಲಿ ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ, ಜೀವಹಾನಿ ಉಂಟಾದ ಯಾವುದೇ ಪ್ರಕರಣ ವರದಿಯಾದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ನಮಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರಲ್ಲದೆ, ನಾಗರಿಕರಿಗೆ ಶುದ್ಧ ನೀರು ಪೂರೈಕೆ ಮಾಡುವುದು ಅಧಿಕಾರಿಗಳ ಹೊಣೆ. ನಿರಂತರವಾಗಿ ಕುಡಿಯುವ ನೀರಿನ ಕ್ಲೋರಿನೇಷನ್ ಆಗಬೇಕು. ಓವರ್ ಹೆಡ್ ಟ್ಯಾಂಕುಗಳನ್ನು ಸ್ವಚ್ಛಗೊಳಿಸಬೇಕು. ಸಿವಿಲ್ ಕಾಮಗಾರಿ ಕೈಗೊಳ್ಳುವಾಗ ಒಳಚರಂಡಿ ನೀರು ಕುಡಿಯುವ ನೀರಿನ ಕೊಳವೆ ಮಾರ್ಗಕ್ಕೆ ಮಿಶ್ರಣವಾಗದಂತೆ ಜಾಗರೂಕತೆವಹಿಸಬೇಕು. ಕುಡಿಯುವ ನೀರಿನ ಪೈಪು ಹಾಗೂ ಒಳ ಚರಂಡಿ ಮಾರ್ಗಕ್ಕೂ ಅಂತರವಿರುವಂತೆ ಕಾಮಗಾರಿ ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್‌ಗಳನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದಾಗ ಸಚಿವರು ಮಾತನಾಡಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುತ್ತಿಗೆದಾರರು ಊಟ ಮಾಡುವವರ ಲೆಕ್ಕವನ್ನು ತಪ್ಪಾಗಿ ನೀಡಿ ಸುಳ್ಳು ಬಿಲ್ ಮಾಡಿಕೊಳ್ಳುವುದನ್ನು ತಡೆಯಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಸುಳ್ಳು ಬಿಲ್ಲುಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದರಲ್ಲದೆ, ಪೌರ ಕಾರ್ಮಿಕರ ನೇಮಕಾತಿ ಹಾಗೂ ವೇತನ ಪಾವತಿ ಬಗ್ಗೆ ಮಾಹಿತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ