ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಪೌತಿ ಖಾತೆಗಾಗಿ ಸಲ್ಲಿಸಿದ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿರುವ ಗ್ರಾಮ ಲೆಕ್ಕಾಧಿಕಾರಿ, ಹಾಗೂ ಉಪ ತಹಸೀಲ್ದಾರ್‌ರನ್ನು ಕೂಡಲೇ ಅಮಾನತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆಗೆ ನಿರ್ದೇಶನ ನೀಡಿದರು.
ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 39,000 ರೈತರಿಗೆ ಪರಿಹಾರ ದೊರೆತಿಲ್ಲ. ಬೆಳೆ ಪರಿಹಾರ ವಿತರಣೆಗೆ ತಾಂತ್ರಿಕ ದೋಷಗಳಿದ್ದರೆ ಕೂಡಲೇ ಸರಿಪಡಿಸಿ ಪರಿಹಾರ ವಿತರಣೆ ಮಾಡಬೇಕು. ಜೂ. 30ರೊಳಗೆ ಅರ್ಹ ರೈತರ ಖಾತೆಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ಪರಿಹಾರ ಜಮೆಯಾಗಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರಿಗೆ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳುವ ಹಾಗೂ ಬೆಳೆ ವಿಮೆ ನೋಂದಣಿ ಮಾಡುವ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ನಿರ್ದೇಶನ ನೀಡಿದರು.ಕೃಷಿ ಜಂಟಿ ನಿರ್ದೇಶಕ ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ವಾರ ಅಲ್ಲಲ್ಲಿ ಚದುರಿದ ಮಳೆಯಾಗಿರುವುದರಿಂದ ಮುಂಗಾರು ಹಂಗಾಮಿನಲ್ಲಿ 24382 ಹೆಕ್ಟೇರ್ ಪ್ರದೇಶದಲ್ಲಿ ಶೇ.7.6ರಷ್ಟು ಮಾತ್ರ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಉಳಿದಂತೆ ಬಿತ್ತನೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿರುವ ಎಲ್ಲಾ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ಕ್ಲೋರಿನೇಷನ್ ಮಾಡಿಸಬೇಕು. ಕುಡಿಯುವ ನೀರು ಯೋಗ್ಯವಿರುವ ಬಗ್ಗೆ ಪರೀಕ್ಷಿಸಿ ದೃಢೀಕರಣ ಪತ್ರ ಪಡೆಯಬೇಕು. ಕುಡಿಯಲು ಯೋಗ್ಯವೆಂದು ದೃಢಪಟ್ಟ ನಂತರವಷ್ಟೇ ಜನರಿಗೆ ಪೂರೈಕೆ ಮಾಡಬೇಕು ಎಂದು ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಮುಂದಿನ 2 ತಿಂಗಳು ಸರ್ಕಾರಿ ರಜೆ ಎಂದು ಮನೆಯಲ್ಲಿರದೆ ಪ್ರತಿ ದಿನ ತಮ್ಮ ವ್ಯಾಪ್ತಿಯ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಗತಿ ಬಗ್ಗೆ ಪರಿಶೀಲಿಸಬೇಕು. ಜಾನುವಾರು ಮೇವು ಸರಬರಾಜುದಾರರು, ತುರ್ತು ಕುಡಿಯುವ ನೀರು ಪೂರೈಕೆಗಾಗಿ ಬಾಡಿಗೆ ಆಧಾರದ ಮೇಲೆ ನೀರು ಪಡೆದ ಖಾಸಗಿ ಕೊಳವೆ ಬಾವಿ ಮಾಲೀಕರು, ಟ್ಯಾಂಕರ್ ನೀರು ಸರಬರಾಜುದಾರರಿಗೆ ಯಾವುದೇ ಬಾಕಿ ಇಟ್ಟುಕೊಳ್ಳದೆ ಹಣವನ್ನು ಕೂಡಲೇ ಪಾವತಿಸಬೇಕು. ಹಣ ಪಾವತಿಯಾದ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.