ಹನರು ಶೈಕ್ಷಣಿಕ ವಲಯದ ಇಬ್ಬರು ಶಿಕ್ಷಕರ ಅಮಾನತು

KannadaprabhaNewsNetwork |  
Published : Nov 13, 2024, 12:50 AM IST
ಹನರು ಶೈಕ್ಷಣಿಕ ವಲಯದ ಇಬ್ಬರು ಶಿಕ್ಷಕರ ಅಮಾನತು | Kannada Prabha

ಸಾರಾಂಶ

ತಾಲೂಕಿನ ಕುರುಬರ ದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ತಾಯಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ ಶಿಕ್ಷಕ ವೆಂಕಟನಾರಾಯಣ ಅವರನ್ನು ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಕುರುಬರ ದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ತಾಯಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ ಶಿಕ್ಷಕ ವೆಂಕಟನಾರಾಯಣ ಅವರನ್ನು ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಅಜ್ಜೀಪುರ ಸಮೀಪದ ಕುರುಬರ ದೊಡ್ಡಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಯ ಪೋಷಕರು ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲು ಶಾಲೆಗೆ ಆಗಮಿಸಿದ್ದಾಗ ಅಸಭ್ಯವಾಗಿ ನಡೆದುಕೊಂಡಿದ್ದ. ಈ ವೇಳೆ ಗ್ರಾಮಸ್ಥರೇ ಹಿಡಿದು ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದರು. ಇದಾದ ನಂತರ ನೊಂದ ಮಹಿಳೆ ದೂರು ನೀಡದೆ ಇದ್ದಿದ್ದರಿಂದ ಶಿಕ್ಷಕರನ್ನು ಬಿಟ್ಟು ಕಳುಹಿಸಿದ್ದರು. ನೊಂದ ಮಹಿಳೆ ನ.11ರಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ಗ್ರಾಮಸ್ಥರು ಅನುಚಿತವಾಗಿ ವರ್ತನೆ ತೋರಿದ ಶಿಕ್ಷಕನ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶುಕ್ರವಾರವೇ ದೂರು ನೀಡಿದ್ದರಿಂದ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದರು.

ಪೋಷಕರ ಜೊತೆ ಅಸಭ್ಯ ವರ್ತನೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕ ವೆಂಕಟನಾರಾಯಣರವರನ್ನು ಅಮಾನತು ಮಾಡಲಾಗಿದೆ.

2 ದಿನಗಳ ಬಳಿಕ ನೋಟಿಸ್ ಜಾರಿ: ನ.8ರ ಶುಕ್ರವಾರ ಕುರುಬರ ದೊಡ್ಡಿ ಶಾಲೆಗೆ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲು ಆಗಮಿಸಿದ್ದ ವಿಕಲಚೇತನ ವಿದ್ಯಾರ್ಥಿಯ ತಾಯಿಯ ಜೊತೆ ಅಸಭ್ಯವಾಗಿ ವರ್ತನೆ ಮಾಡಿರುವುದರಿಂದ ಗ್ರಾಮಸ್ಥರೇ ಗೂಸಾ ನೀಡಿದ್ದರು. ಈ ವೇಳೆ ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಭೇಟಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಈ ವಿಚಾರ ಕನ್ನಡ ಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ನಂತರ ಕನ್ನಡಿಗರ ವಿಜಯ ಸೇನೆಯ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ದೂರು ನೀಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ ನಂತರ ಎಚ್ಚೆತ್ತ ಬಿಇಒ ಗುರುಲಿಂಗಯ್ಯ ಕೊಳ್ಳೇಗಾಲ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ಹೋಟೆಲ್ ವೊಂದಕ್ಕೆ ಶಿಕ್ಷಕ ವೆಂಕಟನಾರಾಯಣ್ ಅವರನ್ನು ಕರೆಸಿಕೊಂಡು ಹಿಂದಿನ ದಿನಾಂಕದಲ್ಲಿ ನೋಟಿಸ್ ನೀಡಿದ ಹಾಗೆ ನೋಟಿಸ್ ಜಾರಿ ಮಾಡಿ ಸ್ವೀಕರಿಸಲಾಗಿದೆ ಎಂದು ಬರೆಸಿಕೊಂಡಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬರುತ್ತಿದೆ.

ತಪ್ಪಿತಸ್ಥ ಸಹ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಕುರುಬರ ದೊಡ್ಡಿ ಗ್ರಾಮದಲ್ಲಿ ರಾಜಿ ಪಂಚಾಯಿತಿ ಮಾಡಿ, ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಎರಡು ದಿನಗಳ ನಂತರ ನೋಟಿಸ್ ಜಾರಿ ಮಾಡಿರುವ ಉದ್ದೇಶ ಏನು ಎಂಬುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಉತ್ತರಿಸಬೇಕಿದೆ.ಹಣ ದುರುಪಯೋಗ ಮತ್ತೊಬ್ಬ ಶಿಕ್ಷಕ ಅಮಾನತು:

ಹನೂರು ತಾಲೂಕಿನ ಹೊಸಪೊಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆಮನೆ ಕಟ್ಟಡದ ಹಣ ದುರುಪಯೋಗಪಡಿಸಿಕೊಂಡಿದ್ದ ಮುಖ್ಯ ಶಿಕ್ಷಕ ಹಾಗೂ ಹಾಲಿ ರಾಮಪುರ ಕ್ಲಸ್ಟರ್ ಸಿಆರ್‌ಪಿ ಮಹೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.

ಒಡೆಯರ್ ಪಾಳ್ಯ ಕ್ಲಸ್ಟರ್ ವ್ಯಾಪ್ತಿಯ ಹೊಸಪೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಂಜೂರಾಗಿದ್ದ ಹಣವನ್ನು ಕಟ್ಟಡ ಕಾಮಗಾರಿ ಪೂರ್ಣ ಮಾಡದೆ ಅಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಮಹೇಶ್ ಕುಮಾರ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರು ಮುಖ್ಯ ಶಿಕ್ಷಕ ಮಹೇಶ್ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸುವಂತೆ ಶಿಕ್ಷಣಾಧಿಕಾರಿ ಗುರುಲಿಂಗಯ್ಯರವರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಸಿಆರ್‌ಪಿ ಹಾಗೂ ಹೊಸ ಪೋಡು ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಕುಮಾರ್ ಅಮಾನತುಗೊಂಡಿದ್ದಾರೆ.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌