ಕನ್ನಡಪ್ರಭ ವಾರ್ತೆ ಮೈಸೂರು
ದೇವೇಗೌಡರನ್ನು ಮುಖ್ಯಮಂತ್ರಿಯನ್ನಾಗಿ ನೀವು ಮಾಡಿದ್ರಾ? ಈ ರಾಜ್ಯದ ಜನ ಮಾಡಿದ್ದು, ನೀವಲ್ಲ. ನಾಡಿನ ಜನರು ಎನ್ನುವುದನ್ನು ಅರಿಯಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ ಎಚ್.ಡಿ. ದೇವೇಗೌಡರು ಯಾವ ಒಕ್ಕಲಿಗ ನಾಯಕರನ್ನು ಬೆಳೆಸದೆ ತುಳಿಯುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ನಿಮ್ಮ ಎಡ- ಬಲ ಭಾಗದಲ್ಲಿ ಕುಳಿತವರನ್ನು ಎತ್ತರಕ್ಕೆ ಬೆಳೆಸಿರುವುದು ದೇವೇಗೌಡರೇ ಹೊರತು ನೀವಲ್ಲ ಎಂದು ಅವರು ಕುಟುಕಿದರು.ಸಿದ್ದರಾಮಯ್ಯ ಸರ್ಕಾರದಲ್ಲಿ ತೊಳೆಯಲಾಗದ ಪಾಪದ ಕೂಪವಿದೆ. ಚುನಾವಣೆಯಲ್ಲಿ ಸ್ಟೀಲ್ ದುಡ್ಡು ಖರ್ಚು ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಹಾಗಾದರೆ, ನಿಮ್ಮದು ಯಾವ ದುಡ್ಡು. ದಲಿತರ ಹಿಂದುಳಿದ ವರ್ಗಗಳ ಅನುದಾನದಲ್ಲಿ ಲೂಟಿ ಮಾಡಿದ್ದನ್ನು ಖರ್ಚು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ನಮ್ಮ ಪಕ್ಷದಲ್ಲಿದ್ದು ತಿಂದು ತೇಗಿ, ಬಸ್ ಓಡಿಸಿಕೊಂಡು ಹೋದರಲ್ಲಾ ಅವತ್ತು ಕುಮಾರಣ್ಣನ ಕಲರ್ ಗೊತ್ತಿರಲಿಲ್ವಾ ಜಮೀರ್? ಮೆಕ್ಕಾ ಮದೀನಾಗೆ ಹೋಗುವ ಸಂದರ್ಭದಲ್ಲಿ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ಕುಮಾರಣ್ಣ ಅಂತಾ ನಮಸ್ಕಾರ ಮಾಡುತ್ತಿದ್ದರಲ್ಲ. ಆಗ ಕುಮಾರಣ್ಣನ ಬಣ್ಣ ಗೊತ್ತಿರಲಿಲ್ವಾ? ಬಣ್ಣ ತಂದೆಯಿಂದ ಬರುವ ಬಳುವಳಿ ಎಂದು ಅವರು ಕುಟುಕಿದರು.
ರಾಜ್ಯ ಸರ್ಕಾರ ನೈತಿಕತೆ ಇದ್ದರೆ ಸಚಿವ ಸಂಪುಟದಿಂದ ಜಮೀರ್ ಅವರನ್ನು ವಜಾಗೊಳಿಸಬೇಕು. ಜಮೀರ್ ಅವರು ದೇವೇಗೌಡ, ಕುಮಾರಸ್ವಾಮಿ ಅವರ ಬಗ್ಗೆ ಇಂದು ಮಾತನಾಡಿರಬಹುದು. ಮುಂದೆ ನಿಮಗೂ ಇದೇ ಗತಿ ಬರಬಹುದು. ಏನು ಪಾಳೆಗಾರಿಕೆ ಮಾಡುತ್ತೀರಾ ಎಂದು ಅವರು ವಾಗ್ದಾಳಿ ನಡೆಸಿದರು.
- ಸಾ.ರಾ. ಮಹೇಶ್, ಮಾಜಿ ಸಚಿವರು