ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಡೆಯುವ ‘ನೀಟ್’ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ಇದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಮರು ಪರೀಕ್ಷೆಯಾಗಬೇಕು ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಎಂ.ಅಬ್ದುಲ್ ರಶೀದ್ ಆಗ್ರಹಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯನ್ನು ದೇಶವ್ಯಾಪಿ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಸುಮಾರು ೩೦ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣದಿಂದ ಉನ್ನತ ವ್ಯಾಸಂಗದ ಹಂಬಲ ಹೊಂದಿದ್ದ ಹಲವು ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗಿದೆ. ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ಕೂಡ ನಡೆದಿದೆ ಎಂದು ಆರೋಪಿಸಿದರು.
‘ನೀಟ್’ ಪರೀಕ್ಷಾ ಅಕ್ರಮಗಳ ಬಗ್ಗೆ ಸೂಕ್ತ ತನಿಖೆಗೆ ಕೇಂದ್ರ ಮುಂದಾಗದಿದ್ದಲ್ಲಿ ವಿದ್ಯಾರ್ಥಿಗಳು ಒಗ್ಗೂಡಿ ಜಿಲ್ಲಾ ಮಟ್ಟದಲ್ಲಿ ಶೀಘ್ರದಲ್ಲೆ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಕಳೆದ ಸಾಲಿನ ನೀಟ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಬೆರಳೆಣಿಕೆಯ ವಿದ್ಯಾರ್ಥಿಗಳಿಗೆ ಬಂದಿದ್ದರೆ, ಈ ಬಾರಿ ಒಟ್ಟು ೬೭ ವಿದ್ಯಾರ್ಥಿಗಳಿಗೆ ಮೊದಲ ರ‍್ಯಾಂಕ್ ಬಂದಿದೆ. ಅದರಲ್ಲೂ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ೮ ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಮೊದಲ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ೭೨೦ ಅಂಕಗಳಿಗೆ ೭೨೦ ಅಂಕ ಗಳಿಸಿದ್ದಾರೆ. ರ‍್ಯಾಂಕ್ ಬಂದಿರುವವರಲ್ಲಿ ೬ ವಿದ್ಯಾರ್ಥಿಗಳು ಒಂದೇ ತರಬೇತಿ ಕೇಂದ್ರದವರಾಗಿದ್ದಾರೆ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ ಎಂದರು.ನೀಟ್ ಪರೀಕ್ಷಾ ಫಲಿತಾಂಶ ಜೂನ್ ೧೪ಕ್ಕೆ ಬದಲಾಗಿ ತರಾತುರಿಯಲ್ಲಿ ಜೂನ್ ೪ ಕ್ಕೆ ಘೋಷಿಸಿರುವುದು ಸಾಕಷ್ಟು ಸಂಶಯಗಳಿಗೆ ಕಾರಣವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದ್ದರು ಕೇಂದ್ರ ಸರ್ಕಾರ ಮಾತನಾಡುತ್ತಿಲ್ಲವೆಂದು ಅಬ್ದುಲ್ ರಶೀದ್ ಟೀಕಿಸಿದರು.
ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮಿದಿಲಾಜ್, ಡಿ.ಎಂ.ಪ್ರತಾಪ್, ಮಡಿಕೇರಿ ಘಟಕದ ಅಧ್ಯಕ್ಷ ಶರಣ್ ಕೆ. ಹಾಗೂ ಉಪಾಧ್ಯಕ್ಷ ಎಂ.ಜಗನ್ ಸುದ್ದಿಗೋಷ್ಠಿಯಲ್ಲಿದ್ದರು.