ಗುರುರಾಜ ಗೌಡೂರು
ಕನ್ನಡಪ್ರಭ ವಾರ್ತೆ ಲಿಂಗಸುಗೂರುಪೈದೊಡ್ಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಗುಡ್ಡಗಾಡು ಪ್ರದೇಶ ಯರಜಂತಿ ಹಾಗೂ ಸುತ್ತಮುತ್ತಲ ದೊಡ್ಡಿಯಲ್ಲಿ ಸಮರ್ಪಕ, ಶುದ್ಧ ಕುಡಿಯುವ ನೀರು ಸಿಗದೇ ಜನರು ಮಳೆ ನೀರಿಗೆ ಬಾಯಿ ತೆರೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಯರಜಂತಿಯಲ್ಲಿ 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ದೊಡ್ಡಿಗಳಲ್ಲಿ ಇಷ್ಟೆ ಸಂಖ್ಯೆ ಜನರು ವಾಸ ಮಾಡುತ್ತಿದ್ದಾರೆ. ಊರು ಹಾಗೂ ದೊಡ್ಡಿಗಳು ಸೇರಿ 9 ಜನ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಬಿರು ಬಿಸಿಲಿನಿಂದ ಜಲಮೂಲ ಬತ್ತಿದಾಗ ಅರೆ ಗುಟುಕು ನೀರು ಕುಡಿದು ಜನ ಜೀವನ ದೂಡಿದ್ದಾರೆ. ಆದರೆ ಇಲ್ಲಿಯ ಗ್ರಾಮ ಆಡಳಿತ ಲೋಕಸಭೆ ಚುನಾವಣೆ, ಬೇಸಿಗೆ ಬಿಸಿಲು ಎಂದು ಬೊಗಳೆ ಬಿಟ್ಟು ಸಮಸ್ಯೆಗೆ ಪರಿಹಾರ ನೀಡದೇ ಕಾಲದೂಡುತ್ತಿದೆ.ಯರಜಂತಿ ಗ್ರಾಮದಲ್ಲಿ ಕೈಪಂಪು 4, ಕಿರು ನೀರು ಸರಬರಾಜು 2, ಊರು ಬಾವಿ 1, ಮೋಟಾರು ಪಂಪು 3, ಒಟ್ಟು 9 ಕಡೆ ಕುಡಿಯುವ ನೀರಿಗೆ ಇದ್ದ ಬಹುತೇಕ ಮೋಟಾರು ಪಂಪುಗಳು ಕೆಟ್ಟಿವೆ ಮತ್ತು ಕೈಪಂಪುಗಳ ದುರಸ್ತಿ ಮಾಡಿಸಿಲ್ಲ. ಗ್ರಾಮದಲ್ಲಿ ತಿಮ್ಮಪ್ಪ ದೇವಸ್ಥಾನ ಮತ್ತು ಊರ ಗುಡ್ಡದ ಮೇಲೆ ಒಟ್ಟು 2 ಕಡೆ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿದ್ದಾರೆ. ಟ್ಯಾಂಕಿನಿಂದ ಗ್ರಾಮಕ್ಕೆ ಕುಡಿಯಲು ಹನಿ ನೀರು ಬಂದಿಲ್ಲ. ಇನ್ನೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಅನೇಕ ವರ್ಷ ಉರುಳಿದರು, ಗ್ರಾಮದ ಜನ ಶುದ್ಧ ನೀರು ನೋಡಲೇ ಇಲ್ಲ.
ಪಿಡಿಒ ಊರಿಗೆ ಬರವಲ್ಲ:ಕುಡಿಯುವ ನೀರಿನ ಸಮಸ್ಯೆ ಕುರಿತು ಪೈದೊಡ್ಡಿ ಪಿಡಿಒ ಭೀಮಣ್ಣನವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೇ ಪರಿಶೀಲನೆಗೆ ಬಾರದೇ ಹಲವು ದಿನಗಳೇ ಕಳೆದಿವೆ. ಯರಜಂತಿ ಊರಿಗೆ ಪಿಡಿಒ ಬಂದಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ.ಕಾನೂನು ಸೇವಾ ಸಮಿತಿಗೆ ಮೊರೆಯಿಟ್ಟ ಗ್ರಾಮಸ್ಥರು:
ಹಲವು ದಿನಗಳಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಅಸಮರ್ಪಕವಾಗಿದ್ದು, ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಲಿಂಗಸುಗೂರು ತಾಲೂಕು ಕಾನೂನು ಸೇವಾ ಸಮಿತಿಗೆ ಮೊರೆಯಿಟ್ಟಿದ್ದಾರೆ. ಶೋಷಿತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿರುವ ಗ್ರಾಮದಲ್ಲಿ ಅಗತ್ಯ ಸವಲತ್ತುಗಳನ್ನು ಕಲ್ಪಿಸದ ಗ್ರಾಪಂ ಹಾಗೂ ತಾಪಂನಿಂದ ನಿವಾಸಿಗಳ ಹಕ್ಕನ್ನು ವಂಚಿಸುತ್ತಿದ್ದಾರೆ ಎಂದು ಸಮಿತಿಗೆ ನೀಡಿದ ದೂರಿನಲ್ಲಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.ಯರಜಂತಿ ಗ್ರಾಮದಲ್ಲಿ ಕುಡಿಯುವ ನೀರಿನ ಮೋಟಾರು ಪಂಪುಗಳು ಪದೇ ಪದೆ ಸುಡ್ತಾ ಇವೆ. ಇದರಿಂದ ನೀರು ಸರಬರಾಜಿನಲ್ಲಿ ತೀವ್ರ ತೊಂದರೆ ಆಗುತ್ತಿದೆ. ಇದಕ್ಕಾಗಿ ಕೈಪಂಪುಗಳನ್ನು ಹಾಕಲಾಗಿದೆ. ಎಲ್ಲವನ್ನು ದುರಸ್ತಿ ಮಾಡಿ, ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಿಗೆ ಕ್ರಮಜರುಗಿಸಲಾಗುವುದು.
ಭೀಮಣ್ಣ, ಪಿಡಿಒ, ಪೈದೊಡ್ಡಿ ಗ್ರಾಪಂ, ಲಿಂಗಸುಗೂರು