ಮಂಜುನಾಥ್ ಟಿ.ಎನ್.
ಜನತೆಯ ಹಿತದೃಷ್ಟಿಯಿಂದ ಮೂಲಭೂತ ಸೌಕರ್ಯ ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಅನುದಾನ ಬಿಡುಗಡೆಗೊಳ್ಳುತ್ತದೆ. ಆದರೆ ಕಾಟಾಚಾರಕ್ಕೆ ಕಾಮಗಾರಿ ಮಾಡಿ ಯೋಜನೆಗೆ ಬಂದ ಅನುದಾನದ ಹಣವನ್ನು ದುರುಪಯೋಗ ಮಾಡಿದ ಕುರಿತು ವಿರಾಜಪೇಟೆ ಬಿಟ್ಟಂಗಾಲ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಪ ಕೇಳಿಬಂದಿದೆ.
ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಪ.ಪಂಗಡ ಕಾಲೋನಿ ಮತ್ತು ನಾಂಗಾಲ ಶಾಲೆಯ ಬಳಿಯ ಪ.ಜಾತಿ ವರ್ಗದ ಜನರು ವಾಸ ಮಾಡುವ ಕಾಲೋನಿಯಲ್ಲಿ ಕುಡಿಯುವ ನೀರು ಯೋಜನೆಗೆ ಕ್ರಮವಾಗಿ ೩ ಲಕ್ಷ ಮತು ೨ ಲಕ್ಷ ರು. ಅನುದಾನ ಬಿಡುಗಡೆಗೊಳಿಸಿಲಾಗಿತ್ತು. ಯೋಜನೆಯ ಕಾಮಗಾರಿಗಳು ಆರಂಭವಾಗಿ ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ, ಆದರೆ ಯೋಜನೆಗೆ ಮೀಸಲಿಟ್ಟ ಹಣವನ್ನು ಬಿಲ್ ಈಗಾಗಲೇ ಮಾಡಿ ಆಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.೨೦೨೩-೨೪ ನೇ ಸಾಲಿನ ೧೪ ನೇ ಹಣಕಾಸು ಯೋಜನೆ ಅಡಿಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಒಟ್ಟು 16,09,175 ಮೊತ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆಗೊಂಡು 2024ರ ಮಾ.11ರಂದು ಅನುದಾನ ಬಿಡುಗಡೆಗೊಡಿತ್ತು. ಇದರಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ಮಾತ್ರ 11,57,500 ರು. ಬಿಡುಗಡೆಗೊಳಿಸಲಾಗಿತ್ತು.
ಇದೇ ರೀತಿ ನಾಂಗಾಲ ಕಳ್ತೋಡು ಸರ್ಕಾರಿ ಶಾಲೆಯ ಬಳಿಯಲ್ಲಿರುವ ಪರಿಶಿಷ್ಟ ಜಾತಿ ಜನಾಂಗದ ಸುಮಾರು 20 ಕುಟುಂಬಗಳಿವೆ. ಕುಡಿಯುವ ನೀರಿಗಾಗಿ ಹಾಹಾಕರ ತಲೆದೋರಿದ ಹಿನ್ನೆಲೆಯಲ್ಲಿ ಕುಡಿಯುವ ನೀರು ಯೋಜನೆಗಾಗಿ 2 ಲಕ್ಷ ರು. ಅನುದಾನ ನೀಡಲಾಗಿತ್ತು. ಯೋಜನೆಯಲ್ಲಿ ಸಾರ್ವಜನಿಕ ಕೊಳವೆ ಬಾವಿ ನಿರ್ಮಾಣ, ಮೋಟಾರ್ ಅಳವಡಿಕೆ, ಮತ್ತು ಪೈಪ್ ಲೈನ್ ಅಳವಡಿಕೆಯೂ ಸೇರಿತ್ತು.
ಈ ಮೂಲಕ ಶೋಷಿತ ಸಮುದಾಯಗಳ ಏಳಿಗೆಗೆ ಯೋಜನೆ ಜಾರಿಯಾಗಿ ಅನುದಾನ ಬಿಡುಗಡೆಗೊಂಡರೂ ಫಲಾನುಭವಿಗಳನ್ನು ತಲುಪದೇ ದುರುಪಯೋಗವಾಗಿದೆ ಎಂಬುದು ಗ್ರಾಮಸ್ಥರ ಆರೋಪ.
................................ಸುಮಾರು 40 ವರ್ಷಗಳಿಂದ ನಾವು ಇಲ್ಲಿ ವಾಸವಿದ್ದೇವೆ. ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದೇವೆ. ಇಲ್ಲಿ ಕುಡಿಯುವ ನೀರಿಗೆ ನಿತ್ಯ ಪರದಾಟವಿದೆ. ಮಳೆಗಾಲದಲ್ಲಿ ಇಂಗುಗುಂಡಿಗಳ ಮೂಲಕ ನೀರು ಆಶ್ರಯಿಸುತ್ತೇವೆ. ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ತಲೆದೋರುತ್ತದೆ. ಸರ್ಕಾರದಿಂದ ಕುಡಿಯುವ ನೀರು ಯೋಜನೆ ಅರಂಭವಾದರೂ ಇಂದಿನ ವರೆಗೆ ಯೋಜನೆ ಪೂರ್ಣಗೊಂಡಿಲ್ಲ. ಶೀಘ್ರ ಕೆಲಸ ಪೂರ್ಣಗೊಳಿಸಿ ನೀರು ಕಲ್ಪಿಸಿ.
...............
-ಭಾಸ್ಕರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ, ವಿರಾಜಪೇಟೆ.