ಕನ್ನಡಪ್ರಭ ವಾರ್ತೆ ಚಳ್ಳಕೆರೆ
ವಾಮಾಚಾರದ ವಸ್ತುಗಳ ಹೊರತೆಗೆಯುವ ವಿಡಿಯೋದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗೊಮ್ಮಟ ನಿಲಯದ ಬೋರ್ ವೆಲ್ ಹತ್ತಿರ ಮಣ್ಣಲ್ಲಿ ಹೂತಿರುವ ವಾಮಾಚಾರದ ವಸ್ತುಗಳನ್ನು ಹೊರತೆಗೆಯುವ ಮತ್ತು ಅದನ್ನು ಕಾಲಲ್ಲಿ ತುಳಿಯುತ್ತಿರುವ ದೃಶ್ಯಗಳು ವೀಡಿಯೋದಲ್ಲಿವೆ.
ಮುದುರಿದ ತಗಡು, ಮಾಂಸದ ತುಂಡುಗಳನ್ನು ಹೊರ ತೆಗೆದಿರುವುದನ್ನು ವಿಡಿಯೋ ಮಾಡಲಾಗಿದೆ.ಸಚಿವ ಡಿ ಸುಧಾಕರ್ ಮನೆಯಲ್ಲಿ ಕೆಲಸ ಮಾಡುವ ಚಂದ್ರು ಎನ್ನುವ ವ್ಯಕ್ತಿ ಈ ವಸ್ತುಗಳನ್ನು ಹೊರತೆಗೆಯುತ್ತಿದ್ದು ಈ ವ್ಯಕ್ತಿಗೆ ಮಾರ್ಗದರ್ಶನ ಮಾಡುತ್ತಿರುವ ಒಂದಿಬ್ಬರ ಕೈಗಳು ಕಾಣಿಸುತ್ತಿರುವ ವೀಡಿಯೋ ಇದಾಗಿದೆ.ಮೊಣಕಾಲು ಶಸ್ತ್ರ ಚಿಕಿತ್ಸೆಗೆಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸುಧಾಕರ್ ಐಸಿಯುನಲ್ಲಿದ್ದಾಗ ಶ್ವಾಸಕೋಶದ ಸೋಂಕು ತಗುಲಿ ಸುಮಾರು ದಿನಗಳ ಕಾಲ ಕೋಮಾದಲ್ಲಿದ್ದರು. ಇಂತಹ ಸ್ಥಿತಿಗೆ ಬರಲು ನಾನಾ ಕಾರಣಗಳು ಕೇಳಿ ಬಂದಿದ್ದವು. ಇದೀಗ ಇಂತಹ ಮಾತುಗಳಿಗೆ ಪುಷ್ಟಿ ಸಿಕ್ಕಂತಾಗಿದೆ. ಕೆಲವರು ಸಚಿವ ಸುಧಾಕರ್ ಅವರನ್ನು ಕೈಗೊಂಬೆಯನ್ನಾಗಿಸಿಕೊಂಡಿದ್ದಾರೆ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತಿದ್ದವು. ಜನರ ಅನುಮಾನಗಳಿಗೆ ಸಾಕ್ಷಿ ಒದಗಿಸುವಂತೆ ಸಚಿವರು ಒಂದಿಬ್ಬರನ್ನು ತೀರಾ ಹತ್ತಿರ ಬಿಟ್ಟುಕೊಂಡದ್ದು ಸಹ ಈಗ ಸಾರ್ವಜನಿಕರ ಅನುಮಾನಕ್ಕೆ ಎಡೆ ಮಾಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಚಳ್ಳಕೆರೆಯ ಬೆಂಗಳೂರು ರಸ್ತೆಯಲ್ಲಿ ಇರುವ ಸುಧಾಕರ್ ನಿವಾಸದ ಮುಂದೆ ವಾಮಾಚಾರ ನಡೆದಿರುವ ಬಗ್ಗೆ ಸ್ಪೋಟಕ ವಿಡಿಯೋ ಹೊರ ಬಂದಿದ್ದು ಸುಧಾಕರ್ ಇಲ್ಲವಾಗುವಂತೆ ಮಾಡಲು ವಾಮಾಚಾರ ಮಾಡಿಸಲಾಗಿದೆ ಎಂಬ ಊಹಾಪೋಹಗಳು ವಿಜೃಂಭಿಸುತ್ತಿವೆ.
ಸುಧಾಕರ್ ಅವರನ್ನು ತಾವು ಹೇಳಿದಂತೆ ಕೇಳುವಂತೆ ಮಾಡಲು ಕೆಲವರು ಕೇರಳದ ಮಾಂತ್ರಿಕರೊಬ್ಬರ ಮೂಲಕ ವಾಮಾಚಾರಕ್ಕೆ ಮೊರೆ ಹೋಗಿದ್ದರೇ ಎಂಬಂತಹ ಊಹಾಪೋಹದ ಮಾತುಗಳು ಜನರ ಬಾಯಿಂದಲೇ ಹೊರಬೀಳುತ್ತಿರುವುದು ಸುಳ್ಳಲ್ಲ. ಸಚಿವರು ನಿಧನರಾಗಿ ಪಾರ್ಥಿವ ಶರೀರವನ್ನು ಹಿರಿಯೂರು, ಚಳ್ಳಕೆರೆಯಲ್ಲಿ ಸಾರ್ವಜನಿಕ ದರ್ಶನಕ್ಕಿಟ್ಟಾಗ, ‘ಹಾಳು ಮಾಡಿ ಬಿಟ್ರು ನಮ್ಮ ಸಾಹೇಬರನ್ನು’ ಎಂದು ಕೆಲವರಾಡುತ್ತಿದ್ದ ಮಾತುಗಳು ಇಂತಹ ಘಟನೆಗಳಿಗೆ ಪುಷ್ಟಿ ನೀಡುತ್ತಿವೆ.