ತುಂಬು ಗರ್ಭಿಣಿ ಅನುಮಾನಾಸ್ಪದ ಸಾವು: ಪತಿ ವಿರುದ್ಧ ಪೋಷಕರಿಂದ ಪೊಲೀಸರಿಗೆ ದೂರು

KannadaprabhaNewsNetwork |  
Published : Jun 08, 2025, 01:20 AM IST
7ಕೆಎಂಎನ್ ಡಿ15 | Kannada Prabha

ಸಾರಾಂಶ

ವಿವಾಹದ ನಂತರ ಕಳೆದ ಎರಡು ತಿಂಗಳಿಂದ ದಂಪತಿ ಮದ್ದೂರಿನ ಚೆನ್ನೇಗೌಡ ಬಡಾವಣೆಯ ಪುರಸಭೆ ಮಾಜಿ ಸದಸ್ಯೆ ಶಾಂತಮ್ಮರ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸವಾಗಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ತುಂಬು ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಶನಿವಾರ ಬೆಳಗಿನ ಜಾವ ಜರುಗಿದೆ.

ಬಡಾವಣೆಯ ಶಾಂತಮ್ಮರ ಮನೆಯಲ್ಲಿ ಬಾಡಿಗೆಗೆ ಇದ್ದ ಚಂದನ್ ಅವರ ಪತ್ನಿ 9 ತಿಂಗಳ ಗರ್ಭಿಣಿ ಆಶಾ (20) ಅನುಮಾನಾಸ್ಪದವಾಗಿ ಸಾವಿಗೀಡಾದವರು. ಮಗಳು ಆಶಾ ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸಿದ್ದು, ಈಕೆಯ ಗಂಡ ಚಂದನ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಚಂದನ್ (24) ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ರವಿ ಪುತ್ರ ಚಂದನ್ ಇದೇ ಗ್ರಾಮದ ಮಹೇಶ್ - ನೀಲಮ್ಮ ದಂಪತಿ ಪುತ್ರಿ ಆಶಾಳನ್ನು ಪರಸ್ಪರ ಪ್ರೇಮಿಸಿ ಒಂದು ವರ್ಷದ ಹಿಂದೆ ವಿವಾಹವಾಗಿದ್ದರು.

ವಿವಾಹದ ನಂತರ ಕಳೆದ ಎರಡು ತಿಂಗಳಿಂದ ದಂಪತಿ ಮದ್ದೂರಿನ ಚೆನ್ನೇಗೌಡ ಬಡಾವಣೆಯ ಪುರಸಭೆ ಮಾಜಿ ಸದಸ್ಯೆ ಶಾಂತಮ್ಮರ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸವಾಗಿದ್ದರು.

ಜೀವನೋಪಾಯಕ್ಕಾಗಿ ಚಂದನ್ ರೈತರ ಜಮೀನಿನ ತೆಂಗಿನ ಮರಗಳಲ್ಲಿ ಎಳನೀರು ಕೀಳುವ ಕೂಲಿ ಕೆಲಸ ಮಾಡುತ್ತಿದ್ದನು. ಪತ್ನಿ ಆಶಾ 9 ತಿಂಗಳ ತುಂಬು ಗರ್ಭಿಣಿಯಾದ ಹಿನ್ನೆಲೆಯಲ್ಲಿ ಜೂ.7 ರಂದು ತನ್ನ ಮನೆಯಲ್ಲಿ ಆಶಾಳ ಸೀಮಂತ ಕಾರ್ಯ ಏರ್ಪಡಿಸಿದ್ದನು. ಈ ಬಗ್ಗೆ ಆಶಾ ತನ್ನ ಪೋಷಕರಿಗೂ ಫೋನ್ ಮಾಡಿ ಸೀಮಂತ ಕಾರ್ಯಕ್ಕೆ ಬರುವಂತೆ ಆಹ್ವಾನ ನೀಡಿದಳು. ಸೀಮಂತ ಕಾರ್ಯದ ಮುನ್ನಾ ದಿನವೇ ಆಶಾ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ಈಕೆ ತಾಯಿ ನೀಲಮ್ಮ ಸಂಶಯ ವ್ಯಕ್ತಪಡಿಸಿ ಗಂಡ ಚಂದನ್ ಆಶಾಳನ್ನು ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಸಂಬಂಧ ಪೊಲೀಸರು ಬಿಎಸ್ಎನ್ ಕಾಯ್ದೆ 194ರ ಅನ್ವಯ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್, ಪಿಎಸ್ಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಆಶಾಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸಂಜೆ ಮದ್ದೂರು ತಾಲೂಕು ಕಚೇರಿಯ ಗ್ರೇಡ್ ಟು ತಹಸೀಲ್ದಾರ್ ಸೋಮಶೇಖರ್ ಸಮ್ಮುಖದಲ್ಲಿ ಮೃತ ಆಶಾ ಶವದ ಮಹಜರು ನಡೆಸಿದ ನಂತರ ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ