ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ದೈಹಿಕ ಆರೋಗ್ಯಕ್ಕೆ ನಾವು ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳು ಅತ್ಯವಶ್ಯಕ ಎಂದು ಪೂರ್ಣಿಮಾ ಆಸ್ಪತ್ರೆಯ ನಿರ್ದೇಶಕಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಸ್. ಪೂರ್ಣಿಮಾ ತಿಳಿಸಿದರು.ರಾಮಕೃಷ್ಣನಗರದ ಸುಯೋಗ ಆಸ್ಪತ್ರೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಉತ್ತಿಷ್ಠ ಭಾರತ ಪ್ರತಿಷ್ಠಾನ ಸಹಯೋಗದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ನಮ್ಮ ಆರೋಗ್ಯದಲ್ಲಿ ಪೌಷ್ಟಿಕಾಂಶದ ಮಹತ್ವ ಕುರಿತು ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿಯರು ತೆಗೆದುಕೊಳ್ಳುವ ಪೋಷಕಾಂಶಗಳು ಜನಿಸುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಣ್ಣು, ಸೊಪ್ಪು, ತರಕಾರಿಗಳಲ್ಲಿ ಹೆಚ್ಚು ಪೋಷಕಾಂಶವಿದ್ದು, ಮಾರುಕಟ್ಟೆಯಲ್ಲಿ ಸಿಗುವ ಪೋಷಕಾಂಶದ ಪಾನೀಯಗಳು ಉಪಯುಕ್ತವಲ್ಲ, ಅವು ಎಂದೆಂದೂ ಅಪಾಯಕಾರಿ. ಹೀಗಾಗಿ, ಮನೆಯೊಳಗೆ ತಯಾರಿಸಿದ ಆಹಾರ ಸೇವಿಸಿ, ನಮ್ಮ ಆಹಾರವನ್ನು ಗೌರವಿಸಿ ಅದರಿಂದ ಉತ್ತಮ ಆರೋಗ್ಯವನ್ನು ಹೊಂದಿರಿ ಎಂದು ಅವರು ಸಲಹೆ ನೀಡಿದರು.ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ತಿಂದ ಆಹಾರವನ್ನು ಜೀರ್ಣಿಸಿಕೊಂಡಾಗ ಮಾತ್ರ ಆರೋಗ್ಯ ಸಾಧ್ಯ. ಋತುಮಾನಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ನಾವು ಪ್ರಕೃತಿಯ ಭಾಗವಾಗಿ ಪ್ರಕೃತಿಯನ್ನು ಅನುಸರಿಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದರು.
ನಾವು ಯಾವಾಗ ತಿನ್ನಬೇಕು, ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬುದರ ಪ್ರಜ್ಞೆ ಅವಶ್ಯಕ. ಸೂರ್ಯನ ಬೆಳಕಿಗೆ ಮೈ ಒಡ್ಡುವಿಕೆಯಿಂದ ಉಚಿತವಾಗಿ ಸಿಗಬಹುದಾದ ವಿಟಮಿನ್ ಡಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಸಾಹಿತಿ ಡಾ. ಲೀಲಾಪ್ರಕಾಶ್ ಮಾತನಾಡಿ, ಚರಕ ಸುಶ್ರುತರಿಂದ ಹೇಳಲ್ಪಟ್ಟ ವೈದ್ಯಕೀಯ ವಿಚಾರ ಗಳು ಸಾರ್ವಕಾಲಿಕ ಮಹತ್ವ ಹೊಂದಿದ್ದು, ಹಸಿವಾದಾಗ ಮಾತ್ರ ತಿನ್ನಿ. ಎರಡು ಬಾರಿ ಮಾತ್ರ ಆಹಾರ ಸೇವನೆ ಅಪೇಕ್ಷಣೀಯ. ಆಹಾರದ ಪರಿಕ್ರಮಗಳ ಬಗ್ಗೆ ಎಚ್ಚರ ವಹಿಸಿ. ಮೊಬೈಲ್ ನೋಡುತ್ತ ಆಹಾರಸೇವಿಸಬೇಡಿ. ಬಿಸಿಯಾಗಿ ಆಹಾರ ಸೇವಿಸಿ. ಶಾಂತ ಚಿತ್ತದಿಂದ ಆಹಾರ ಸೇವಿಸಿ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಯೋಗಾಚಾರ್ಯ ಎಂ.ಪಿ. ರಮೇಶ್ ಬಾಬು, ಕಸಾಪ ಉಪಾಧ್ಯಕ್ಷ ಎನ್. ಅನಂತು, ಉತ್ತಿಷ್ಠ ಭಾರತ ಪ್ರತಿಷ್ಠಾನ ಕಾರ್ಯದರ್ಶಿ ಎಂ.ವಿ. ನಾಗೇಂದ್ರಬಾಬು ಮೊದಲಾದವರು ಇದ್ದರು.