೨೧ ವರ್ಷಗಳಾದರೂ ನಿವಾಸಿಗಳಿಗೆ ಸಿಗದ ಹಕ್ಕುಪತ್ರ । ಸದ್ಬಳಕೆಯಾಗಬೇಕಿದ್ದ ಲಕ್ಷಾಂತರ ರೂ. ಅನುದಾನ ನಿರುಪಯುಕ್ತ
ಎಂ. ಪ್ರಹ್ಲಾದ್‌ಕನ್ನಡಪ್ರಭ ವಾರ್ತೆ ಕನಕಗಿರಿಪಟ್ಟಣದ ೧೭ನೇ ವಾರ್ಡ್ ವ್ಯಾಪ್ತಿಯ ಸ್ವಾಮೇರ ಗದ್ದಿ ನಿವಾಸಿಗಳು ಹಕ್ಕುಪತ್ರ ಹಾಗೂ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಮಂಡಲ ಪಂಚಾಯಿತಿಯ ಪ್ರಧಾನರಾಗಿದ್ದ ದಿ.ಮಹಾಬಳೇಶ್ವರಸ್ವಾಮಿ ಅವರ ಜಮೀನಿನಲ್ಲಿ 2002-2003ನೇ ಸಾಲಿನಲ್ಲಿ ಬಡವರಿಗೆ ನಿವೇಶನ ಸಹಿತ ಸೂರು ಕಲ್ಪಿಸುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವಧಿಯಲ್ಲಿ ೭೭ ಆಶ್ರಯ ಮನೆ ನಿರ್ಮಿಸಿ ಬಡವರಿಗೆ ಹಸ್ತಾಂತರಿಸಲಾಗಿತ್ತು. ಆದರೆ, ೨೧ ವರ್ಷಗಳಾದರೂ ಈ ವರೆಗೂ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ.ಅಂದಿನ ಕಂದಾಯ ಸಚಿವ ಮಲ್ಲಿಕಾರ್ಜುನ ನಾಗಪ್ಪ ಬಡವರಿಗೆ ಸೂರು ನೀಡುವ ಮೂಲಕ ಬಡವರಿಗೆ ನೆರವಾಗಿದ್ದರು. ಹಕ್ಕು ಪತ್ರ ಕೊಡುತ್ತೇವೆ ಎಂಬ ಭರವಸೆಯನ್ನು ಇಂದಿಗೂ ಶಾಸಕ, ಸಂಸದರು ನೀಡುತ್ತಾ ಬಂದಿದ್ದಾರೆಯೇ ಹೊರತು ಜನತೆಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಇಲ್ಲಿಯ ಜನಕ್ಕೆ ಹಕ್ಕುಪತ್ರ ಪಡೆಯುವುದೇ ಬಹು ದೊಡ್ಡ ಸಮಸ್ಯೆಯಾಗಿದೆ.
೨೦೦೭ರಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಟ್ಯಾಂಕ್ ಸೋರುತ್ತಿತ್ತು. ಕಳೆದೆರಡು ವರ್ಷದ ಹಿಂದೆ ಟ್ಯಾಂಕ್ ದುರಸ್ತಿಗೊಳಿಸಿ, ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್ ಸುತ್ತಮುತ್ತಲೂ ಜಾಲಿಗಿಡಗಳು ಬೆಳೆದಿದ್ದು, ವಿಷಜಂತುಗಳ ಕಾಟ ಹೆಚ್ಚಾಗಿದೆ. ಅಲ್ಲದೇ ಇದೇ ಮಾರ್ಗದಲ್ಲಿ ಗ್ರಾಪಂ ಆಡಳಿತವಿದ್ದಾಗ 2009ರಲ್ಲಿ ೭ ಮಳಿಗೆಗಳು ಜಿಪಂ ಅನುದಾನದಲ್ಲಿ ನಿರ್ಮಾಣಗೊಂಡಿದ್ದವು. ಅಂದಿನಿಂದ ಇದುವರೆಗೂ ಅವು ಬಳಕೆಯಾಗಿಲ್ಲ. ಸದ್ಬಳಕೆಯಾಗಬೇಕಿದ್ದ ಲಕ್ಷಾಂತರ ರೂ. ಅನುದಾನ ನಿರುಪಯುಕ್ತವಾಗಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.ತಂಗಡಗಿ ಸಾಹೇಬ್ರೆ ಹಕ್ಕು ಪತ್ರ ಕೊಡಿಸಿ:
ತಂಗಡಗಿ ಸಾಹೇಬ್ರು ಚುನಾವಣಾ ಪೂರ್ವದಲ್ಲಿ ನಾನು ಗೆದ್ದರೆ ಹಕ್ಕುಪತ್ರ ನೀಡುವುದಾಗಿ ಹೇಳಿದ್ದರು. ಆದರೆ ಅವರು ಗೆದ್ದು ೧೪ ತಿಂಗಳಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ನಮ್ಮ ಏರಿಯಾದ ಕಡೆ ಅವರು ಬಂದಿಲ್ಲ. ಹಕ್ಕುಪತ್ರ ವಿತರಣೆ ಜತೆಗೆ ಕಾಲನಿಯಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಸಚಿವರು ಒಮ್ಮೆ ಕಾಲನಿಗೆ ಭೇಟಿ ನೀಡಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.೪೦ ಮನೆಗಳ ಮಾರಾಟ?:
ಆಶ್ರಯ ಮನೆ ನಿರ್ಮಾಣದ ಬಳಿಕ ಸ್ವಾಮೇರ ಗದ್ದಿಯ ೩ ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಹಾಗಾಗಿ ಈಗ ೧೫೦ ಮನೆಗಳಿದ್ದು, ಈ ಪೈಕಿ ೪೦ ಆಶ್ರಯ ಮನೆಗಳನ್ನು ಫಲಾನುಭವಿಗಳು ಮಾರಾಟ ಮಾಡಿದ್ದಾರೆನ್ನಲಾಗಿದೆ. ಮಾರಾಟ ಮಾಡಿದ್ದನ್ನು ಬಿಟ್ಟು ಉಳಿದ ಫಲಾನುಭವಿಗಳಿಗಾದರೂ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಜನ ಬೇಸತ್ತು ಹೋಗಿದ್ದಾರೆ.ಸಮಸ್ಯೆಗೆ ಸಿಗುತ್ತಾ ಮುಕ್ತಿ?:
ಜೂ.೨೬ರಂದು ಪಟ್ಟಣದ ಎಪಿಎಂಸಿಯಲ್ಲಿ ಜನಸ್ಪಂದನಾ ಸಭೆ ನಡೆಯುತ್ತಿದ್ದು, ಹಕ್ಕುಪತ್ರಕ್ಕಾಗಿ ೨೧ ವರ್ಷಗಳಿಂದ ಪಂಚಾಯಿತಿಗೆ ಅಲೆದಾಡುತ್ತಿರುವ ಫಲಾನುಭವಿಗಳಿಗೆ ಸಚಿವರು ಹಕ್ಕುಪತ್ರ ವಿತರಿಸುತ್ತಾರಾ? ಅಥವಾ ಮರು ಪರಿಶೀಲಿಸಿ ಕ್ರಮ ಕೈಗೊಳ್ಳುವ ನಿರ್ಧಾರ ಅನುಸರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.