ಕನ್ನಡಪ್ರಭ ವಾರ್ತೆ ಮಂಡ್ಯ
ಸೇವೆ ಮತ್ತು ತ್ಯಾಗ ಭಾರತದ ಬಹುದೊಡ್ಡ ಆದರ್ಶಗಳು ಎಂದು ವಿಶ್ವಕ್ಕೇ ಸಾರಿದ ಮಹಾನ್ ದಾರ್ಶನಿಕ ಹಾಗೂ ಯುವ ಜನಾಂಗದ ಪ್ರೇರಣಾ ಶಕ್ತಿಯಾಗಿದ್ದವರು ಸ್ವಾಮಿ ವಿವೇಕಾನಂದ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಜಿಲ್ಲಾಸ್ಪತ್ರೆಯ ಮಮತೆಯ ಮಡಿಲು ನಿತ್ಯ ದಾಸೋಹ ಕೇಂದ್ರದಲ್ಲಿ ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಗರ್ಭಿಣಿ, ಬಾಣಂತಿ ಮತ್ತು ಅಗತ್ಯವುಳ್ಳವರಿಗೆ ಪೌಷ್ಟಿಕಾಹಾರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ವಿಶ್ವಪರ್ಯಟನೆ ಮಾಡುವ ಮೂಲಕ ಭಾರತದ ತತ್ವಜ್ಞಾನ, ವೇದಾಂತ, ಯೋಗ, ವಿಜ್ಞಾನ-ತಂತ್ರಜ್ಞಾನ ಹಾಗೂ ಹಿಂದೂ ಧರ್ಮದಲ್ಲಿರುವ ಉತ್ಕೃಷ್ಟ ಮೌಲ್ಯಗಳನ್ನು ಇಡೀ ಜಗತ್ತಿಗೇ ಪರಿಚಯಿಸಿದರು. ಹಸಿದವರಿಗೆ ಅನ್ನ ನೀಡುವುದು ಅತ್ಯುತ್ತಮ ಸೇವೆ ಎಂದು ಭಾವಿಸಿದ್ದರು ಎಂದರು.೧೮೯೭ರಲ್ಲಿ ರಾಮಕೃಷ್ಣ ಮಿಷನ್ ಸ್ಥಾಪನೆ ಮಾಡಿ ಅನ್ನ, ಅಕ್ಷರ, ಅರಿವು, ಆಧ್ಯಾತ್ಮಿಕ ವಿಚಾರಗಳನ್ನು ಸ್ವಾಮಿ ವಿವೇಕಾನಂದರು ಭೋಧಿಸುತ್ತಿದ್ದರು. ನಂತರ ಎಲ್ಲಾ ರಾಮಕೃಷ್ಣ ಮಿಷನ್‌ಗಳಲ್ಲಿ ಮೊದಲು ಅನ್ನದಾಸೋಹ ನೆರವೇರಿಸಿ ನಂತರ ಶಿಕ್ಷಣ ನೀಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ನುಡಿದರು.
ಯೋಗಿ ಪುರುಷ ಸ್ವಾಮಿ ವಿವೇಕಾನಂದರು ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ, ಬೋಧನೆ ನೀಡಿದ್ದಾರೆ, ಮಹಿಳೆಯರ ಸಬಲೀಕರಣ, ದೇಶ ಕಟ್ಟುವ ಕಾರ್ಯದಲ್ಲಿ ಯುವಜನರ ಪಾತ್ರ, ಶಿಕ್ಷಣ, ವೈಜ್ಞಾನಿಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಬೆಳೆಯಲು ಜಗತ್ತಿಗೆ ಬೇಕಾದ ಅಲೋಚನೆಗಳನ್ನು ಅಂದೇ ವಿಶ್ವದೆದುರು ತೆರೆದಿಟ್ಟಿದ್ದರು. ಅಂದಿನ ದಿನಗಳಲ್ಲಿ ಮೈಸೂರು ರಾಜವಂಶಸ್ಥ ಒಡೆಯರ್ ಅವರೊಂದಿಗೆ ಚರ್ಚಿಸಿ, ಬೆಂಗಳೂರಿನಲ್ಲಿನ ಟಾಟಾ ಸಂಸ್ಥೆಯೊಂದಿಗೆ ಇಂಡಿಯನ್ ಸೈನ್ಸ್ ಸಂಸ್ಥೆಯ ಸ್ಥಾಪನೆಗೆ ಮುಂದಾಗಿದ್ದರು. ಇಂದು ಇಸ್ರೋ ವಿಶ್ವಮಟ್ಟದಲ್ಲಿ ಬೆಳೆದಿದೆ ಎಂದರೆ ಸ್ವಾಮಿ ವಿವೇಕಾನಂದರ ದೂರದೃಷ್ಟಿತ್ವದ ಪರಿಕಲ್ಪನೆ ಕಾರಣ ಎಂಬುದನ್ನು ಸ್ಮರಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಉಪಾಧ್ಯಕ್ಷ ವೈ.ಎಚ್.ಲೋಹಿತ್‌ಕುಮಾರ್, ಕಲಾ ತಪಸ್ವಿ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಅನಿಲ್‌ಕುಮಾರ್, ಪರಿಸರ ರೂರಲ್ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಂಗಲ ಯೋಗೇಶ್ ಮತ್ತಿತರರಿದ್ದರು.