ರಾಷ್ಟ್ರೀಯ ಯುವ ದಿನಾಚರಣೆ । ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮ
ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳನ್ನು ಪ್ರತಿಯೊಬ್ಬ ಯುವಕರೂ ಪಾಲಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಕೊಡುಗೆಗಳನ್ನು ನೀಡಬೇಕು ಎಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಕರೆ ನೀಡಿದರು.
ಇಲ್ಲಿನ ಮಹಾವೀರ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯುವಕರು ದೇಶದ ಆಸ್ತಿ, ಯುವಕರಿಗೆ ಸರಿಯಾದ ಮಾರ್ಗದರ್ಶನ ಸೌಲಭ್ಯಗಳು ಸಿಕ್ಕರೆ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಎಂದ ಅವರು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಯುವಕರಿಗೆ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಸಾಲಸೌಲಭ್ಯ ಒದಗಿಸುವ ‘ವಿಶ್ವಾಸ್’ ಆ್ಯಪ್ ಬಿಡುಗಡೆ ಮಾಡಿರುವುದಾಗಿ ಘೋಷಿಸಿದರು.
ಮಾಜಿ ಸೂಡಾ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಯುವ ಜನತೆ ಅದರಲ್ಲೂ ವಿದ್ಯಾರ್ಥಿಗಳು ವಿವೇಕಾನಂದರ ಬಗ್ಗೆ ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳಬೇಕು. ಅವರ ಕೃತಿಗಳನ್ನು ಓದಬೇಕು. ಆ ಮೂಲಕ ಅವರ ಆದರ್ಶ, ಗುರಿಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಯುವ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಮಾತನಾಡಿ, ಸ್ವಾಮಿ ವಿವೇಕಾನಂದರು ಈಶ್ವರಚಂದ್ರಸಾಗರ್, ರಾಜಾರಾಮ ಮೋಹನರಾಯ್ ಮತ್ತು ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು. ಈ ಮೂವರ ಆದರ್ಶಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ದೇಶದ ಅಭಿವೃದ್ಧಿ ಯುವಕರಿಂದ ಮಾತ್ರ ಸಾಧ್ಯ ಎನ್ನುವುದನ್ನು ಮನಗಂಡಿದ್ದ ಅವರು, ಯುವಕರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದರು. ಅವರ ಸಾಧನೆ, ಯುವಕರಿಗೆ ಅವರ ಪ್ರೇರಣೆ ಅನನ್ಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಂ ಪಾಶ, ಶಿವಕುಮಾರ್ , ಮಹಾನಗರ ಪಾಲಿಕೆ ಮಾಜಿ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ್, ನಗರಾಧ್ಯಕ್ಷ ಚರಣ್, ಪ್ರಮುಖರಾದ ರವಿ ಕಾಟಿಕೆರೆ, ಚಂದ್ರೋಜಿರಾವ್, ರಂಗೇನಹಳ್ಳಿ ರವಿ, ಜೀವನ್, ಸಿ.ಜಿ. ಮಧುಸೂದನ್, ಕೆ.ಚೇತನ್, ಅಬ್ದುಲ್ಲಾ, ಹರ್ಷಿತ್ ಸೇರಿ ಹಲವರಿದ್ದರು.