ಕೂಡ್ಲಿಗಿ: ದೇಶದ ಪ್ರಗತಿಗೆ ಯುವಜನರ ಶಕ್ತಿ ಬಳಕೆಯಾಗಬೇಕು. ಯುವಜನರೇ ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬಂತೆ ಬೋಧನೆ ಮಾಡಿರುವ ಸ್ವಾಮಿ ವಿವೇಕಾನಂದರ ಬೋಧನೆ ನಮಗೆಲ್ಲ ದಾರಿದೀಪವಾಗಬೇಕು ಎಂದು ಯುವ ಬ್ರಿಗೇಡ್ ಕಾರ್ಯಕರ್ತ ಕೆಂಚಮಲ್ಲನಹಳ್ಳಿ ಕೆ.ಜಿ. ಬಸವರಾಜ ತಿಳಿಸಿದರು.
ಜೀವನವನ್ನು ಸುಂದರವಾಗಿ ಹಾಗೂ ಅರ್ಥಪೂರ್ಣವಾಗಿಸುವ ಅವರ ವಾಣಿಯನ್ನು ಪ್ರತಿಯೊಬ್ಬರೂ ಓದಬೇಕಿದೆ. ರಾಜ್ಯಾದ್ಯಂತ ವಾಗ್ಮಿ, ಚಕ್ರವರ್ತಿ ಸೂಲಿಬೆಲಿ ಅವರ ಮಾರ್ಗದರ್ಶನದಲ್ಲಿ ನಾನಾ ವರ್ಷಗಳಿಂದ ವಿವೇಕ ಮಾಲೆ ಧರಿಸುವ ಮೂಲಕ ಯುವಕರು ಸದೃಢ ದೇಹ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ವಿವೇಕ ಮಾಲೆ ಕಾರ್ಯಕ್ರಮದಲ್ಲಿ 18 ದಿನಗಳ ಕಾಲ ವ್ಯಾಯಾಮ, ಯೋಗ, ಧ್ಯಾನದಲ್ಲಿ ತೊಡಗುವಂಥ ಯುವಕರು ಉತ್ತಮ ದಿಕ್ಕಿನಲ್ಲಿ ಸಾಗುವಂತಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರಾದ ದಯಾನಂದ ಸಜ್ಜನ್, ಸಂಜಯ ನಾಯಕ, ಕಾಮಶೆಟ್ಟಿ ವಿನೋದ್, ಪರಶುರಾಮ, ಕಣದಮನೆ ಶಿವಕುಮಾರ್, ತಿಪ್ಪೇಶ್, ಸುದೀಪ್, ಬಸವರಾಜ, ಸತೀಶ್, ಕ್ಲಿಂಟನ್, ಗುರುಮೂರ್ತಿ ಸೇರಿ ಇತರರಿದ್ದರು. ಇದೇ ಸಂದರ್ಭದಲ್ಲಿ ಯುವ ಬ್ರಿಗೇಡ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್‌ಗಳನ್ನು ವಿತರಿಸಲಾಯಿತು.