-ಹಿರಿಯರ ಕಾಡಿಕೆ ನೆಪದಲ್ಲಿ ಹಣ ಪೀಕುತ್ತಿದ್ದ ಸ್ವಾಮೀಜಿ, ಸಹಚರರನ್ನು ಬಂಧಿಸಿದ ಪೊಲೀಸರು
-------ಕನ್ನಡಪ್ರಭ ವಾರ್ತೆ ಸುರಪುರ
ಹಿರಿಯರ ಕಾಡಿಕೆ ಪರಿಹರಿಸುವ ಹೆಸರಿನಲ್ಲಿ ಸಾರ್ವಜನಿಕರಿಗೆ ಸ್ವಾಮೀಜಿ ವೇಷ ತೊಟ್ಟು ತಾಲೂಕಿನ ಕಕ್ಕೇರಾ ಸಮೀಪದ ಮಂಜಲಾಪುರದಲ್ಲಿ ವಂಚನೆ ಮಾಡುತ್ತಿದ್ದ ಮೂವರನ್ನು ಕೊಡೇಕಲ್ ಪೊಲೀಸರು ಬಂಧಿಸಿದ್ದಾರೆ.ಕಕ್ಕೇರಾ ಪುರಸಭೆ ವ್ಯಾಪ್ತಿಯ ಮಂಜಲಾಪುರದಲ್ಲಿ ಸ್ವಾಮೀಜಿ ಹಾಗೂ ಅವರ ಸಹಚರರ ಅಮಾಯಕ ಜನರನ್ನು ನಂಬಿಸಿ, ಹಣ ವಸೂಲಿ ಮಾಡುತ್ತಿದ್ದರು. ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ವಾಮೀಜಿ ಸಹಿತ ಐವರ ತಂಡ ಗ್ರಾಮದ ಹಲವು ಮನೆಗಳಿಗೆ ಭೇಟಿ ನೀಡಿದೆ. ನಿಮಗೆ ಹಿರಿಯರ ಕಾಡಿಕೆಯಿದೆ. ಅದನ್ನು ಕ್ಷಣಾರ್ಧದಲ್ಲೇ ನಾವು ಬಗೆಹರಿಸುತ್ತೇವೆ ಎಂದು ಹೇಳಿ ಹಣ ಕಿತ್ತಿದ್ದಾರೆ.
ಮಾಟ-ಮಂತ್ರ ಮಾಡಿರುವುದನ್ನು ಬಗೆಹರಿಸಿದ್ದೇವೆ ಎಂದು ನಂಬಿಸಿ ಮಂಜಲಾಪುರ ಗ್ರಾಮದ ಮಹಿಳೆಯರಿಗೆ ಲಿಂಬೆಹಣ್ಣು, ದೇವರ ಆಧಾರ ಕೊಡುತ್ತಿದ್ದರು. ಈ ಮೂಲಕ ಒಬ್ಬೊಬ್ಬ ಮಹಿಳೆಯರಿಂದ 10 ರಿಂದ 20 ಸಾವಿರ ರು.ಗಳವರೆಗೆ ಪೀಕಿದ್ದಾರೆ. ಕೇಳಿದಷ್ಟು ಹಣ ಕೊಟ್ಟು ಮಹಿಳೆಯರು ಕಂಗಲಾಗಿದ್ದಾರೆ. ನಂತರ ಸಂಶಯ ಬಂದು ಮೂವರನ್ನು ಹಿಡಿದು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದರೆ ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.ನಂತರ ಸ್ಥಳಕ್ಕೆ ಬಂದ ಕೊಡೇಕಲ್ ಪೊಲೀಸರು ಮೂವರ ಬಳಿಯಿದ್ದ 23 ಸಾವಿರ ರು.ಗಳು ವಶಕ್ಕೆ ಪಡೆದಿದ್ದಾರೆ. ಯಾವ ಮಹಿಳೆಯರಿಂದ ಹಣ ಪಡೆದಿದ್ದರೋ ಅವರಿಗೆ ಹಣ ಹಿಂದಿರುಗಿಸಿದ್ದಾರೆ.
ಹಿರಿಯರ ಕಾಡಿಕೆ ನೆಪದಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಮೂವರನ್ನು ಕೊಡೇಕಲ್ ಪೊಲೀಸ್ ಠಾಣೆಗೆ ಕರೆ ತರಲಾಗಿದೆ. ಮಂಜಲಾಪುರದ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಯಾವುದೇ ದೂರನ್ನು ದಾಖಲಿಸಿಕೊಂಡಿಲ್ಲ ಎಂದು ಹುಣಸಗಿ ಸಿಪಿಐ ಸಚಿನ್ ಚಲುವಾದಿ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದ್ದಾರೆ.-----
28ವೈಡಿಆರ್13: ಸುರಪುರ ತಾಲೂಕಿನಲ್ಲಿ ಹಿರಿಯರ ಕಾಡಿಕೆ ನೆಪದಲ್ಲಿ ಹಣ ಪೀಕುತ್ತಿದ್ದ ಸ್ವಾಮೀಜಿ ಮತ್ತು ಸಹಚರರನ್ನು ಪೊಲೀಸರು ಬಂಧಿಸಿರುವುದು.