ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಬಸವಲಿಂಗ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುರು ಎಂದರೆ ಕೇವಲ ಪುಸ್ತಕದ ಜ್ಞಾನ ಬೋಧಿಸುವವರಲ್ಲ; ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಸುಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಶಕ್ತಿಯೇ ಗುರು ಎಂದು ಹೇಳಿದರು. ಪ್ರತಿಯೊಬ್ಬರ ಜೀವನದಲ್ಲೂ ಮುಂದೆ ಗುರಿ, ಹಿಂದೆ ಗುರು ಇದ್ದರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. 12ನೇ ಶತಮಾನದ ಬಸವಾದಿ ಶಿವಶರಣರು ಗುರು-ಲಿಂಗ-ಜಂಗಮ ತತ್ವದ ಮೂಲಕ ಸಮಾಜವನ್ನು ಧರ್ಮ, ಸಮಾನತೆ ಹಾಗೂ ಮಾನವೀಯತೆಯ ಮಾರ್ಗದಲ್ಲಿ ಮುನ್ನಡೆಸಿದರು ಎಂದು ತಿಳಿಸಿದರು. ಗುರುಪೂರ್ಣಿಮೆ ಅಂಗವಾಗಿ ಆಗಮಿಸಿದ್ದ ಎಲ್ಲ ಶರಣರಿಗೆ ಆಶೀರ್ವಾದಗಳನ್ನು ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಮಲ್ಲಿಕಾರ್ಜುನಪ್ಪ ಕಾಮನಹಳ್ಳಿ, ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು. ಹಡಪದ ಅಪ್ಪಣ್ಣರನ್ನು ಸಮಾಜದಲ್ಲಿ ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲೇ ಬಸವಣ್ಣವರು ಅನುಭವ ಮಂಟಪಕ್ಕೆ ಪ್ರವೇಶಿಸುವ ಮೊದಲು ಅವರ ದರ್ಶನ ಪಡೆದ ಘಟನೆ ಜಾತಿ ವ್ಯವಸ್ಥೆ ಮತ್ತು ಶೋಷಣೆಯ ವಿರುದ್ಧ ಬಸವಣ್ಣವರ ಸಮಾನತೆಯ ಸಂದೇಶವನ್ನು ಸಾರುತ್ತದೆ ಎಂದು ಹೇಳಿದರು. ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳ ಬದುಕಿನಲ್ಲಿ ಗುರುಗಳ ಪಾತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.ಅತಿಥಿಯಾಗಿ ಭಾಗವಹಿಸಿದ್ದ ಡಾ. ವೆಂಕಟೇಶ್ ಅವರು ಮುಕುಂದೂರು ಬಸವಲಿಂಗ ಶಿವಯೋಗಿಗಳ ಜೀವನ, ತತ್ವ ಮತ್ತು ಸಮಾಜಮುಖಿ ಕಾರ್ಯಗಳನ್ನು ಪರಿಚಯಿಸಿದರು. ದೈಹಿಕ ಅನಾರೋಗ್ಯಕ್ಕೆ ವೈದ್ಯರು ಹೇಗೆ ಅಗತ್ಯವೋ, ಮಾನಸಿಕ ನೋವು ಮತ್ತು ಆತಂಕ ನಿವಾರಣೆಗೆ ಆಧ್ಯಾತ್ಮಿಕ ಅನುಭವ ಹಾಗೂ ಶಿವಾನುಭವ ಕಾರ್ಯಕ್ರಮಗಳು ಮನಸ್ಸಿಗೆ ಶಾಂತಿ ನೀಡುತ್ತವೆ ಎಂದು ಹೇಳಿದರು.ಮತ್ತೋರ್ವ ಅತಿಥಿ ನಾಗಮಂಗಲದ ಶರಣ ಮಂಜುನಾಥ ಶಾಸ್ತ್ರಿಗಳು ಮಾತನಾಡಿ, ಮುಕುಂದೂರು ಬಸವಲಿಂಗ ಶಿವಯೋಗಿಗಳ ತತ್ವ, ಸಿದ್ಧಾಂತಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಕುಂದೂರು ಬಸವಲಿಂಗ ಶಿವಯೋಗಿಗಳ ಭಜನಾ ಸಂಘ, ಕಾಮನಹಳ್ಳಿ ಹಾಗೂ ಕೊಳಗುಂದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಅಪಾರ ಸಂಖ್ಯೆಯ ಶರಣರು ಹಾಗೂ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.