ಕೊಪ್ಪಳ: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ಮತದಾರರ ಪಟ್ಟಿ ಸಿದ್ದಪಡಿಸುವಂತೆ ಭಾರತ ಚುನಾವಣಾ ಆಯೋಗವು ನಿರ್ದೇಶನ ನೀಡಿದ್ದು, ಅದರಂತೆ ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಸಮಿತಿ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿಯೂ ಸ್ವೀಪ್ ಸಮಿತಿ ರಚಿಸಿ, ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಪದವೀಧರ ಶಿಕ್ಷಕರಿಗೆ ಮಾಹಿತಿ ನಿರ್ದೇಶನ ನೀಡಿ ಎಂದು ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ.ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲೂಕು ಮಟ್ಟದ ಸಮಿತಿ ಅಧ್ಯಕ್ಷರಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು,ಸದಸ್ಯ ಕಾರ್ಯದರ್ಶಿಗಳಾಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು,ಪೌರಾಯುಕ್ತರು ಹಾಗೂ ನಗರ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಸದಸ್ಯರಾಗಿರುತ್ತಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೇಮಕ ಮಾಡಿದ ಸಮಿತಿಯು ಮತದಾನ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ 6-11-2025 ರವರೆಗೆ ಪ್ರತಿ ಶನಿವಾರ ಅಧ್ಯಕ್ಷರ ಕಚೇರಿಯಲ್ಲಿ ಸಭೆ ಸೇರಿ ಅರ್ಹ ಮತದಾರರನ್ನು ಗುರುತಿಸುವಲ್ಲಿ ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕುಲಪತಿಗಳು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಇತರೆ ಸಮುಚಿತವೆನಿಸುವ ಅಧಿಕಾರಿಗಳ ಸಭೆ ಕಡ್ಡಾಯವಾಗಿ ಕರೆದು ಅರ್ಹ ಮತದಾರರಿಂದ ನಮೂನೆ 19ರಲ್ಲಿ ನೋಂದಣಿಗಾಗಿ ಅರ್ಜಿ ಪಡೆದು ಸಂಬಂಧಪಟ್ಟ ಸಹಾಯಕ ಮತದಾನ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರ, ನಗರಸಭೆಯ ಪೌರಾಯುಕ್ತ ವೆಂಕಟೇಶ ನಾಗನೂರ, ಪಿಯು ವಿಭಾಗದ ಎಸ್‌ಎಲ್‌ಎಂಟಿ ಎಸ್.ಎ. ಮೆಳ್ಳಿ, ಪ್ರೌಢಶಾಲಾ ವಿಭಾಗದ ಎಸ್‌ಎಲ್‌ಎಂಟಿ ಎಸ್.ಬಿ. ಕುರಿ, ಸ್ವೀಪ್ ಸಮಿತಿಯ ಶ್ರೀನಿವಾಸ ಚಿತ್ರಗಾರ, ವಾರ್ತಾ ಇಲಾಖೆ ಸಿಬ್ಬಂದಿ ಇದ್ದರು.