ಸಿಹಿ ಹಂಚಿ ಕನ್ನಡ ಸಂಘಟನೆ ವಿಜಯೋತ್ಸವ

KannadaprabhaNewsNetwork |  
Published : Mar 31, 2026, 04:30 AM IST
FreedomPlark  1 | Kannada Prabha

ಸಾರಾಂಶ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಿಂದಿ ಹೇರಿಕೆ ವಿರೋಧಿ-ಕರ್ನಾಟಕ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪಾಲ್ಗೊಂಡಿದ್ದವು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಲ್ಲ ಎಂದು ರಾಜ್ಯ ಸರ್ಕಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದವು.

ಸೋಮವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಿಂದಿ ಹೇರಿಕೆ ವಿರೋಧಿ-ಕರ್ನಾಟಕ ಒಕ್ಕೂಟ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯು ಸೇರಿದಂತೆ ಮೂರನೇ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಕಡ್ಡಾಯವಲ್ಲ ಎಂಬ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ಪ್ರಜಾಸತ್ತಾತ್ಮಕ, ಕನ್ನಡಪರ ಹಾಗೂ ಚಾರಿತ್ರಿಕ ನಿಲುವನ್ನು ಘೋಷಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಕನ್ನಡಿಗರ ಪರವಾಗಿ ಧನ್ಯವಾದಗಳು ಎಂದು ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದರು.

2026-27ನೇ ಸಾಲಿನಿಂದ ಶಾಶ್ವತವಾಗಿ ಕರ್ನಾಟಕ ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ತೆಗೆದು ದ್ವಿಭಾಷಾ ಸೂತ್ರ ನೀತಿ ಜಾರಿಗೊಳಿಸಬೇಕು. ಸರ್ಕಾರದ ಈ ನಿರ್ಧಾರವು ಕೇವಲ 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಾತ್ರ ಅನ್ವಯಿಸುವಂತಿದೆ. ಇದನ್ನು ದೃಢೀಕರಿಸುವ ಆದೇಶ ಹೊರಡಿಸುವಾಗ ಐದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ಹಂತದವರೆಗೂ ಹಿಂದಿ ಕಲಿಕೆ ಕಡ್ಡಾಯವಲ್ಲ ಎಂಬ ಸ್ಪಷ್ಟ ನಿಲುವನ್ನು ಸರ್ಕಾರ ಪ್ರಕಟಿಸಬೇಕು. ಈ ಹಿಂದೆ ಹಿಂದಿ ಭಾಷೆಯ ಪರೀಕ್ಷೆಗಳಲ್ಲಿ ನಪಾಸಾಗಿರುವ ಎಲ್ಲ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ಸಿಗುವಂತೆ ಸೂಕ್ತ ಆದೇಶ ಹೊರಡಿಸಿ, ಲಕ್ಷಾಂತರ ಯುವಜನರ ಶೈಕ್ಷಣಿಕ ಬದುಕು ಪುನಶ್ಚೇತನಗೊಳಿಸಲು ಅವಕಾಶ ನೀಡಬೇಕು ಎಂದು ಒಕ್ಕೂಟ ಆಗ್ರಹಿಸಿತು.

ಹಿಂದಿ ಭಾಷಾ ಕೌಶಲ್ಯವಿರುವ ಮತ್ತು ಉದ್ಯೋಗದ ನಿರೀಕ್ಷೆಯಲ್ಲಿರುವ ಅರ್ಹ ಕನ್ನಡಿಗರನ್ನು ವಲಸಿಗರಿಗೆ ಕನ್ನಡ ಕಲಿಸುವ ಯೋಜನೆಯೊಂದನ್ನು ರೂಪಿಸಿ ತೊಡಗಿಸಬೇಕು. ಕರ್ನಾಟಕ ಯಾವುದೇ ಶಿಕ್ಷಣ ಪದ್ಧತಿಯಲ್ಲಿ ಹೇರಿಕೆಯ ಹಿಂದಿ ಕಲಿಕೆಯ ನೀತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಹಿರಿಯ ಚಿಂತಕ ಜಾಣಗೆರೆ ವೆಂಕಟರಾಮಯ್ಯ, ರಾಧಾಕೃಷ್ಣ, ಕರವೇ ಅಧ್ಯಕ್ಷ ಶಿವರಾಮೇಗೌಡ, ದ್ರಾವಿಡ ಕನ್ನಡಿಗ ಚಳವಳಿಯ ಅಭಿಗೌಡ, ನಾವೇ ಕರ್ನಾಟಕ ಸಂಘದ ಪಾರ್ವತೀಶ್‌ ಬಿಳಿದಾಳೆ, ಚೇತನಗೌಡ, ಕನ್ನಡ ಕುಮಾರ್‌, ಪಾಲನೇತ್ರ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಕೆಪಿಎಸ್‌ ಚುನಾವಣೆ: ಮೃತರ ಹೆಸರಲ್ಲಿ ಮತ ಚಲಾವಣೆ
ರೈತರು ಸಾವಯವ ಕೃಷಿಗೆ ಆದ್ಯತೆ ಕೊಡಬೇಕು