ಭಟ್ಕಳದಲ್ಲಿ 10 ದಿನಗಳ ಈಜು ತರಬೇತಿ ಶಿಬಿರ ಮುಕ್ತಾಯ
ಇಲ್ಲಿನ ಶೊಟೊಕಾನ್ ಕರಾಟೆ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ 10 ದಿನಗಳ ಈಜು ತರಬೇತಿ ಶಿಬಿರ ಯಶಸ್ವಿಯಾಗಿ ಮುಕ್ತಾಯ ಕಂಡಿತು.
ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಪತ್ರಕರ್ತ ರಾಮಚಂದ್ರ ಕಿಣಿ ಮಾತನಾಡಿ, ಈಜು ಕೇವಲ ಕ್ರೀಡೆ ಅಲ್ಲ, ಜೀವ ಉಳಿಸುವ ಮಹತ್ವದ ಕೌಶಲ್ಯವಾಗಿದೆ. ಸ್ವಸ್ಥ ಶರೀರ, ಆರೋಗ್ಯಯುತವಾದ ಮನಸ್ಸಿಗೆ ಇದು ಉತ್ತಮ ಸಾಧನವಾಗಿದೆ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಧೈರ್ಯ, ಆತ್ಮವಿಶ್ವಾಸ ಹಾಗೂ ಶಿಸ್ತನ್ನು ಬೆಳೆಸುವುದಲ್ಲದೆ, ನೀರಿನಲ್ಲಿ ಆಗುವ ಅಪಘಾತಗಳನ್ನು ತಪ್ಪಿಸುವಲ್ಲಿ ಸಹಕಾರಿಯಾಗುತ್ತದೆ. ಸಮುದ್ರ ತೀರ ಪ್ರದೇಶವಾದ ಭಟ್ಕಳದಲ್ಲಿ ಪ್ರತಿಯೊಬ್ಬರೂ ಈಜು ಕಲಿಯುವುದು ಅತ್ಯಗತ್ಯ ಎಂದರು.ದಂತ ವೈದ್ಯ ಡಾ. ರವಿ ಮಾತನಾಡಿ, ಭಟ್ಕಳದಲ್ಲಿ ಶಾಶ್ವತ ಈಜುಕೊಳದ ಕೊರತೆ ಇದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಮರ್ಪಕ ಈಜುಕೊಳ ನಿರ್ಮಾಣ ಅತ್ಯಾವಶ್ಯಕ. ಈ ಹಿನ್ನೆಲೆ ಸಂಬಂಧಿಸಿದ ಇಲಾಖೆಗೆ ಮನವಿ ನೀಡಬೇಕು ಎಂದು ಹೇಳಿದರು.
ನ್ಯೂ ಇಂಗ್ಲಿಷ್ ಶಾಲೆಯ ಶಿಕ್ಷಕ ಶರತ್ ಮಾತನಾಡಿ, ವಿದ್ಯಾರ್ಥಿಗಳು ಶಾರೀರಿಕ ಕೌಶಲ್ಯಗಳ ಜೊತೆಗೆ ಮಾನಸಿಕ ದೃಢತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.