ಹುಬ್ಬಳ್ಳಿ: ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಸ್ವಿಸ್ ಬ್ಯಾಂಕಿನಲ್ಲಿ ದೇಶದ ₹1700 ಸಾವಿರ ಕೋಟಿ ಹಣವಿತ್ತು. ಅದೀಗ ₹37 ಸಾವಿರ ಕೋಟಿಗೆ ಏರಿಕೆಯಾಗಿದೆ. ಹೀಗಿರುವಾಗ ಯಾವ ಮಾನದಂಡದ ಆಧಾರದ ಮೇಲೆ ಕೇಂದ್ರ ಸಚಿವ ಜೋಶಿ ಅವರು ಕೇಂದ್ರದಲ್ಲಿ ಭ್ರಷ್ಟಾಚಾರ ಇಲ್ಲ ಎನ್ನುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಕೈಗೊಂಡ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಅದಾನಿ ಬಂದರಿನಲ್ಲಿ ₹21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ಅದರ ಹಣ ಪಹಲ್ಗಾಮ್ ದಾಳಿಯಲ್ಲಿ ಬಳಕೆಯಾಗಿದೆ ಎಂದು ಅವರದ್ದೇ ಎನ್‌ಐಎ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಚಕಾರ ಎತ್ತುತ್ತಿಲ್ಲ. ಬೆಟ್ಟಿಂಗ್ ಆ್ಯಪ್‌ನಲ್ಲಿ ದಂಧೆ ನಡೆಸುವವರಿಂದ ಹಾಗೂ ಗೋ ಮಾಂಸ ರಫ್ತು ಮಾಡುವವರಿಂದ ಬಿಜೆಪಿ ಚಂದಾ ಎತ್ತಿ ಪಕ್ಷದ ಕಚೇರಿ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯವರು ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ, ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತೇವೆ ಎಂದಿದ್ದರು. ಈಗ ಅದು ಏನಾಯ್ತು? ಜಿಯೋನವರು ಬಿಎಸ್‌ಎನ್‌ಎಲ್‌ಗೆ ₹1700 ಕೋಟಿ ಕೊಡಬೇಕು. ಆ ಹಣ ಪಡೆಯಲು ಕೇಂದ್ರ ಸರ್ಕಾರ ಇದು ವರೆಗೆ ಮುಂದೆ ಬರುತ್ತಿಲ್ಲ. ಅಂದಾನಿ, ಅಂಬಾನಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ಬಡವರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಆದರೆ, ಛತ್ರಿಯನ್ನೂ ನಾವು ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. 200 ಮಿಲಿಯನ್ ಡಾಲರ್ ರಫ್ತು ವ್ಯಾಪಾರ ಕುಸಿದಿದೆ. ಮೇಕ್ ಇನ್ ಇಂಡಿಯಾ ಎಲ್ಲಿದೆ? ಎಂದು ಪ್ರಶ್ನಿಸಿದರು.
ಜನರಿಗೆ ಸುಳ್ಳು ಭರವಸೆ ನೀಡಿ, ದಿಕ್ಕು ತಪ್ಪಿಸುವುದೇ ಕೇಂದ್ರದ ಕೆಲಸವಾಗಿದೆ. ಆದರೆ, ಅಕ್ಕಪಕ್ಕದ ಯಾವ ದೇಶದ ಜತೆಗೂ ನಮ್ಮ ಸಂಬಂಧ ಚೆನ್ನಾಗಿಲ್ಲ.