ಅರಿವಿನ ಸಂಕೇತ ಜ್ಞಾನ ಕಾರ್ತಿಕೋತ್ಸವ-ಗಡ್ಡದ್ದೇವರಮಠ

KannadaprabhaNewsNetwork |  
Published : Dec 15, 2023, 01:31 AM IST
ಪೋಟೊ-೧೪ ಎಸ್.ಎಚ್.ಟಿ. ೧ಕೆ-ಬೀರೇಶ್ವರ ಕಾರ್ತಿಕೋತ್ಸವದ ನಿಮಿತ್ತ ಏರ್ಪಡಿಸಿದ್ದ ಡೊಳ್ಳಿನ ಪದಗಳ ಸ್ಪರ್ಧೆ ಕಾರ್ಯಕ್ರಮ ಉದ್ಘಾಟನೆ ನಂತರ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಮಾತನಾಡಿದರು. | Kannada Prabha

ಸಾರಾಂಶ

ಶಿರಹಟ್ಟಿ ಪಟ್ಟಣದ ಶ್ರೀ ಬೀರೇಶ್ವರ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಗದಗ-ಬೆಂಗಳೂರ ಇವರ ಸಹಯೋಗದಲ್ಲಿ ಶ್ರೀ ಬೀರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಜರುಗಿದ ಡೊಳ್ಳಿನ ಪದಗಳ ತ್ರಿಕೋನ ಸ್ಪರ್ಧೆ ಹಾಗೂ ಸವಿಸವಿ ನೆನಪು ಜನಪದ ರಸಮಂಜರಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎಸ್‌. ಗಡ್ಡದ್ದೇವರಮಠ ಮಾತನಾಡಿದರು.

ಶಿರಹಟ್ಟಿಯಲ್ಲಿ ಬೀರೇಶ್ವರ ಕಾರ್ತಿಕೋತ್ಸವ

ಶಿರಹಟ್ಟಿ: ಬಹಿರಂಗದ ಕತ್ತಲೆ ಕಳೆಯುವ ದೀಪ ಕೇವಲ ಸಾಂಕೇತಿಕವಾಗಿದೆ. ಆದರೆ ಅಂತರಂಗದ ಕತ್ತಲೆ ಕಳೆದು ಅಂತರ್ಯದ ಬೆಳಕನ್ನು ಅರಿಯುವ ಮೂಲಕ ನನ್ನನ್ನು ನಾನು ಅರಿಯುವುದು ಕಾರ್ತಿಕೋತ್ಸವದ ಉದ್ದೇಶ. ಅದು ಅರಿವಿನ ಸಂಕೇತದ ಜ್ಞಾನ ಕಾರ್ತಿಕೋತ್ಸವ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಅಭಿಪ್ರಾಯಪಟ್ಟರು.

ಬುಧವಾರ ಸಂಜೆ ಪಟ್ಟಣದ ಶ್ರೀ ಬೀರೇಶ್ವರ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಗದಗ-ಬೆಂಗಳೂರ ಇವರ ಸಹಯೋಗದಲ್ಲಿ ಶ್ರೀ ಬೀರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಜರುಗಿದ ಡೊಳ್ಳಿನ ಪದಗಳ ತ್ರಿಕೋನ ಸ್ಪರ್ಧೆ ಹಾಗೂ ಸವಿಸವಿ ನೆನಪು ಜನಪದ ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಶಾಂತಿ, ಅನ್ಯಾಯ, ಅಜ್ಞಾನ ಜತೆಗೆ ಅರಿಷಡ್ ವರ್ಗಗಳೆಂಬ ಅನಿಷ್ಠ ಕತ್ತಲೆ ಜ್ಞಾನದ ಬೆಳಕಿನಿಂದ ಹೋಗಲಾಡಿಸಿ ಅಲ್ಲಿ ಶಾಂತಿ, ನ್ಯಾಯ, ಸುಖ, ನೆಮ್ಮದಿ, ಸಮಾನತೆ ಬೆಳಗಿಸುವುದರ ಸಂಕೇತವಾಗಿ ದೀಪ ಹಚ್ಚುವ ಕಾರ್ತಿಕೋತ್ಸವ ಆಚರಿಸುತ್ತೇವೆ. ಅದರ ನಿಮಿತ್ತವಾಗಿ ಪೂಜ್ಯರ, ವಿದ್ವಾಂಸರ ಉಪದೇಶಾಮೃತ ಏರ್ಪಡಿಸಿ ಅವರಿಂದ ಜ್ಞಾನದ ಜ್ಯೋತಿ ಬೆಳಗಿಸಿ ಅವರ ಹಿತನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅರವಿನಿಂದ ನಾವು ಅಭಿವೃದ್ಧಿ ಹೊಂದಬಹುದಾಗಿದೆ ಎಂದು ತಿಳಿಸಿದರು.

ಕಾರ್ತಿಕ ಮಾಸದಲ್ಲಿ ಹಗಲು ಕಡಿಮೆ, ರಾತ್ರಿ ಹೆಚ್ಚು ರಾತ್ರಿಯ ಅವಧಿ ಹೆಚ್ಚಾಗಿರುವ ಈ ಮಾಸದಲ್ಲಿ ಕತ್ತಲು ಕೂಡ ಜಾಸ್ತಿಯೇ ಇರುತ್ತದೆ. ಕತ್ತಲನ್ನು ಕಳೆಯಲು ಬೆಳಕು ಬೇಕು. ಬೆಳಕು ಬೆಳಗಲು ಸಾಧನವೊಂದು ಬೇಕು. ಹಗಲಾದರೆ ಸೂರ್ಯನಿರುತ್ತಾನೆ. ಅದೇ ರಾತ್ರಿ ಈಗೇನೋ ವಿದ್ಯುದ್ದೀಪಗಳಿವೆ. ಹಿಂದೆಲ್ಲಾ ಹಣತೆಯ ದೀಪಗಳೇ ಬೆಳಕಿನ ಮೂಲಗಳಾಗಿದ್ದವು ಈ ಕಾರಣದಿಂದ ಹುಟ್ಟಿಕೊಂಡಿದ್ದೇ ಕಾರ್ತಿಕ ದೀಪ ಎಂದು ಹೇಳಿದರು.

ನ್ಯಾಯವಾದಿ ಮಹೇಶ ಹಾರೋಗೇರಿ ಉಪನ್ಯಾಸ ನೀಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಜ್ಞಾನದ ಅವಶ್ಯಕತೆ ಇದೆ. ಮೀನಿಗೆ ನೀರಿನ ಅವಶ್ಯಕತೆ ಹೇಗೋ ಹಾಗೆ ಮನುಷ್ಯನಿಗೆ ಜ್ಞಾನದ ಅವಶ್ಯ. ಜ್ಞಾನ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ. ನಮ್ಮನ್ನು ನಾವು ಅರಿಯುವ, ಅಂತರಂಗವನ್ನು ತಿಳಿದುಕೊಳ್ಳುವ ಜ್ಞಾನ. ಅಂತರಂಗದ ಕತ್ತಲೆ ಓಡಿಸಿ, ಬೆಳಕು ಚೆಲ್ಲುವದು ಜ್ಞಾನ. ಅದರ ಸಂಕೇತವಾಗಿರುವ ಕಾರ್ತಿಕ ಮಾಸ ದೀಪಗಳ ಮಾಸವಾಗಿದೆ ಎಂದರು.

ಮಕ್ಕಳಿಗೆ ಶಿಕ್ಷಣ ಕೊಡಿಸಿ: ಸಮಾಜದ ಮಕ್ಕಳಿಗೆ ಪೋಷಕರು ಉನ್ನತ ಶಿಕ್ಷಣ ಕೊಡಿಸುವ ಗುರಿ ಹೊಂದಿರುವುದು ಹೆಚ್ಚು ಅರ್ಥಪೂರ್ಣವಾಗಿದ್ದರೂ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು. ಹೀಗಾದಾಗ ಮಾತ್ರ ಮಕ್ಕಳು ಪಡೆದ ಶಿಕ್ಷಣಕ್ಕೆ ಹೆಚ್ಚಿನ ಸಾರ್ಥಕತೆ ದೊರೆಯುತ್ತದೆ. ಹಿಂದೆ ಶಿಕ್ಷಣವೆನ್ನುವುದು ಕೆಲವೇ ಮುಂದುವರಿದ ವರ್ಗಗಳ ಆಸ್ತಿಯೆಂಬಂತಾಗಿತ್ತು. ಹಿಂದುಳಿದ ವರ್ಗಗಳಿಗೆ ಈ ಅವಕಾಶ ಕಡಿಮೆ ಇತ್ತು. ಸರ್ಕಾರಗಳ ಕಾಳಜಿಯಿಂದ ಇಂದು ಎಲ್ಲ ರೀತಿಯ ಶಿಕ್ಷಣ ಪಡೆಯುವ ಅವಕಾಶ ದೊರಕುತ್ತಿದ್ದು, ಪೋಷಕರು ಇದಕ್ಕೆ ಆಧ್ಯತೆ ನೀಡಬೇಕು ಎಂದು ತಿಳಿಸಿದರು.

ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನು ಸಮಾಜಕ್ಕೆ ಆಸ್ತಿಯನ್ನಾಗಿಸಿ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಜೊತೆಯಲ್ಲಿಯೇ ಸಂಸ್ಕಾರ ಕಲಿಸಬೇಕು. ಸಂಸ್ಕೃತಿಯ ಪರಿಚಯ ಮಾಡಿಕೊಡುವುದು ಅವಶ್ಯಕವಾಗಿದೆ.

ನಾಗರಿಕತೆಯ ನಾಗಾಲೋಟದಲ್ಲಿ ಆದರ್ಶ ಕುಟುಂಬಗಳ ಪರಿಕಲ್ಪನೆ ಇಲ್ಲವಾಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಮಾರ್ಪಟ್ಟು ಸಾಮಾಜಿಕ ವ್ಯವಸ್ಥೆ ವಿನಾಶದತ್ತ ಮುಖಮಾಡಿದೆ. ಪ್ರಾಣಿ, ಪಕ್ಷಿಗಳು ತಮ್ಮ ಬದುಕಿಗೆ ಅರ್ಥವನ್ನು ರೂಢಿಸಿಕೊಂಡಿವೆ. ಆದರೆ ಬುದ್ಧಿವಂತ ಪ್ರಾಣಿಯಾದ ಮಾನವ ತನ್ನ ಬದುಕನ್ನು ವ್ಯರ್ಥವಾಗಿ ಕಳೆಯುತ್ತಾ ಅಮೂಲ್ಯವಾದ ಜೀವನವನ್ನು ನಾಶಮಾಡಿಕೊಳ್ಳುತ್ತಿದ್ದಾನೆ ಎಂದು ವಿಷಾದಿಸಿದರು.

ಚಲನಚಿತ್ರ ತಾರೆ ಭಾವನಾ ರಾಮಣ್ಣ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಬಟ್ಟೂರ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಹೊನ್ನಪ್ಪ ಶಿರಹಟ್ಟಿ ಮಂಜುನಾಥ ಘಂಟಿ, ಸುರೇಶ ಗೋಕಾಕ, ನೀಲಪ್ಪ ಶರಸೂರಿ, ಭಾಗ್ಯಶ್ರೀ ಬಾಬಣ್ಣ, ಶಿವನಗೌಡ ಪಾಟೀಲ, ತಾಲೂಕ ಕುರುಬರ ಸಂಘದ ಅಧ್ಯಕ್ಷ ಹೊನ್ನೇಶ ಪೋಟಿ, ಶೇಖಣ್ಣ ಕಾಳೆ, ಆನಂದ ಮಾಳೆಕೊಪ್ಪ, ನಿಂಗಪ್ಪ ಹಮಿಗಿ, ಮಂಜುನಾಥ ಹಮಿಗಿ ಸೇರಿ ಅನೇಕರು ಇದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು