ಕುಟುಂಬ ರಾಜಕಾರಣ ಬಗ್ಗೆ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ
ಸ್ವಾಭಿಮಾನಿ ಬಳಗದಿಂದ ವಿಚಾರ ಸಂಕ್ರಾಂತಿ ಹಾಗೂ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಸಮಾರಂಭ ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಫೆ.16ರಂದು ನಡೆಯಲಿದೆ ಎಂದು ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶ್ರೀ ಜಯದೇವ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ ಎಂದರು.ನಂತರ ಶ್ರೀ ಶಿವಯೋಗಿ ಮಂದಿರದಲ್ಲಿ ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ವಿಚಾರ ಸಂಕ್ರಾಂತಿ ಕಾರ್ಯಕ್ರಮ ನಡೆಯಲಿದೆ. ಸಾಮಾಜಿಕ ಕಳಕಳಿಯುಳ್ಳ, ಪ್ರಜ್ಞಾವಂತ ಹೋರಾಟಗಾರರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಬಳಗದ ಜಿಲ್ಲಾಧ್ಯಕ್ಷ ಶಿವಕುಮಾರ ಶೆಟ್ಟರ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿರುಪಾಕ್ಷಪ್ಪ ಪಂಡಿತ್, ಅಹಿಂದ ಮುಖಂಡ ಎಸ್.ಎಂ.ಸಿದ್ದಲಿಂಗಪ್ಪ, ರಾಜ್ಯ ಸಂಚಾಲಕ ಮೊಹಮ್ಮದ್ ಸಾದಿಕ್, ಜಿಲ್ಲಾ ಸಂಚಾಲಕ ಎಸ್.ಚಂದ್ರಶೇಖರ ಇತರರು ಇದ್ದರು.
ಹರಿಹರ ತಾ. ಮಲೆಬೆನ್ನೂರು ಗ್ರಾಮದಲ್ಲಿ ಸಾರ್ವಜನಿಕ ಜನತಾ ಅದಾಲತ್ ವೇಳೆ ತಮಗೆ ಅಧಿಕಾರಿಗಳು ಅಡ್ಡಿಪಡಿಸುವಂತೆ ಹರಿಹರ ಕ್ಷೇತ್ರದ ಕೆಲ ಕಾಂಗ್ರೆಸ್ ಮುಖಂಡರು ತೆರೆ ಮರೆಯಲ್ಲೇ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದು, ಇಂತಹದ್ದು ನೀವು ಹೆಚ್ಚು ಮಾಡಿದಷ್ಟೂ ಸ್ವಾಭಿಮಾನಿ ಬಳಗ ಹಾಗೂ ನಮ್ಮ ಹೋರಾಟವೂ ತೀವ್ರಗೊಳ್ಳುತ್ತ ಸಾಗುತ್ತದೆ ಎಂದು ಜಿ.ಬಿ.ವಿನಯಕುಮಾರ ಗುಟುರು ಹಾಕಿದರು.
ದಾವಣಗೆರೆ ಮಹಾ ನಗರ ಪಾಲಿಕೆ ಸೇರಿದಂತೆ ಮುಂಬರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸ್ವಾಭಿಮಾನಿ ಬಳಗದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ದಾವಣಗೆರೆ ಪಾಲಿಕೆಯ ಎಲ್ಲಾ 45 ವಾರ್ಡ್‌ನಲ್ಲೂ ನಮ್ಮ ಅಭ್ಯರ್ಥಿಗಳ ಸ್ಪರ್ಧೆ ಇರಲಿದೆ. ಜನರೂ ಸಹ ಬದಲಾವಣೆ ಬಯಸುತ್ತಿದ್ದಾರೆ. ಅದು ಸ್ವಾಭಿಮಾನಿ ಬಳಗದ ಮೂಲಕವೇ ಆಗಲಿದೆ ಎಂದು ಅವರು ತಿಳಿಸಿದರು.